UN NETWORKS
ಪಾವೂರು: ಗರ್ಭಿಣಿಯರು ಹಾಗೂ ಬಾಣಂತಿಯರು ಸಂಕಷ್ಟ ಎದುರಿಸಬಾರದು ಎನ್ನುವ ನೆಲೆಯಲ್ಲಿ ಮಹತ್ವಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿ ಮಹಾತ್ಮಾ ಗಾಂಧಿ ಜನ್ಮ ದಿನದಂದು ಫಲಾನುಭವಿಗಳಿಗೆ ಸಮರ್ಪಿಸಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ತಿಳಿಸಿದರು.
ಪಾವೂರು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತೃತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ ಸಹಿತ ಮಾನವ ಜೀವ ಉಳಿಸುವುದೂ ಸರ್ಕಾರದ ಗುರಿ. ಮಾತೃತ್ವ ಯೋಜನೆ ರಾಜ್ಯದಾದ್ಯಂತ ಚಾಲನೆ ದೊರೆತಿದ್ದು, ದ.ಕ.ಜಿಲ್ಲೆಯಲ್ಲಿ ಮೂಡಬಿದಿರೆ, ಮಂಗಳೂರು ಉತ್ತರ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಪಾವೂರಿನಲ್ಲಿ ಸಾಂಕೇತಿಕ ಕಾರ್ಯಕ್ರಮದ ಮುಖಾಂತರ ಉದ್ಘಾಟಿಸಲಾಗಿದೆ ಎಂದು ಹೇಳಿದರು.
ಮಂಗಳೂರು ಸಹಾಯಕ ಆಯುಕ್ತ ರೇಣಿಕಾ ಪ್ರಸಾದ್ ಮಾತನಾಡಿ, ಗರ್ಭಿಣಿಯರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೊರತೆ ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ಸರ್ವೇ ಸಂದರ್ಭ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳ ಜೊತೆ ಮಾತೃತ್ವ ಯೋಜನೆ ಜಾರಿಗೆ ತಂದಿದ್ದು, ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ತಿಳಿಸಿದರು.
ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಫಿರೋಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲೀಲಾವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ, ತಾಲೂಕು ಪಂಚಾಯಿತಿ ಸದಸ್ಯರಾದ ಶಶಿಪ್ರಭಾ ಶೆಟ್ಟಿ, ಪದ್ಮಾವತಿ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ. ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಂಕರಿ ಕಾರ್ಯಕ್ರಮ ನಿರೂಪಿಸಿದರು.


