UN NETWORKS
ಉಳ್ಳಾಲ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ದರದೊಂದಿಗೆ ಔಷಧಿ ಸಿಗುವಂತೆ ರಾಜ್ಯ ಮತ್ತು ಕೇಂದ್ರ ಡ್ರಗ್ ಕಂಟ್ರೋಲ್ ಇಲಾಖೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮಂಗಳೂರು 1 ಇದರ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ರಮಾಕಾಂತ್ ಕುಂಟೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ವಿಭಾಗ ಸೋಮವಾರ ಪಾನೀರು ವಿನಿಂದ ನಿಟ್ಟೆ ಆಸ್ಪತ್ರೆ ವರೆಗೆ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಹಾಗೂ ಕ್ಷೇಮ ಆಡಿಟೋರಿಯಂನಲ್ಲಿ ಆಯೋಜಿಸಲಾದ ವಿಶ್ವ ಫಾರ್ಮಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಹೆಚ್ಚು ಮೂರು ಡ್ರಗ್ ಟೆಸ್ಟಿಂಗ್ ಲ್ಯಾಬ್ ಗಳನ್ನು ತೆರೆಯಲಾಗಿದ್ದು, ಈ ಮೂಲಕ ನಕಲಿ ಔಷಧಿಗಳ ಪತ್ತೆಹಚ್ಚುವಿಕೆ ಕಾರ್ಯಕ್ಕೆ ಸಹಕಾರಿಯಾಗಿದೆ. ರಕ್ತದ ವಿಚಾರದಲ್ಲೂ ಹಲವು ರೀತಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಇಲಾಖೆ ಮೂಲಕ ಪತ್ತೆಹಚ್ಚಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು 2 ರ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ ನಾಯ್ಕ್ ಮಾತನಾಡಿ ಸಮಾಜದಲ್ಲಿ ಫಾರ್ಮಸಿಸ್ಟ್ ಗಳನ್ನು ಗುರುತಿಸುವ ಕಾರ್ಯಗಳು ಆಗುತ್ತಿಲ್ಲ. ಇದು ಫಾರ್ಮಸಿಸ್ಟ್ ಗಳು ತಮ್ಮ ಪದವಿ ಸರ್ಟಿಫಿಕೇಟುಗಳನ್ನು ಪದವಿಯೇತರರಿಗೆ ನೀಡದಿರುವುದೇ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿ.ವಿ ಉಪಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ ವಹಿಸಿ ಸಂಶೋಧನೆಗಳು ನಡೆಯುತ್ತಿದ್ದರೂ ಆವಿಷ್ಕಾರಗಳು ನಡೆಯದೆ ಜನರಿಗೆ ತಲುಪುವ ಕೆಲಸವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಫಾರ್ಮಸಿ ವಿಭಾಗದಲ್ಲೂ ಅಂತಹ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ.ಶಿವಕುಮಾರ್ ಹಿರೇಮಠ ಉಪಸ್ಥಿತರಿದ್ದರು. ಈ ಸಂದರ್ಭ ಫಾರ್ಮಸಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಯಿರಾಧ ಗ್ರೂಪಿನ ಅಧ್ಯಕ್ಷ ಮನೋಹರ್.ಎಸ್.ಶೆಟ್ಟಿ ಹಾಗೂ ಹಿರಿಯ ಫಾರ್ಮಸಿಸ್ಟ್ ಪಿ.ಪಾಂಡುರಂಗ ರಾವ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿಟ್ಟೆ ಫಾರ್ಮಸಿ ಕಾಲೇಜು ಪ್ರಾಂಶುಪಾಲ. ಡಾ.ಸಿಎಸ್.ಶಾಸ್ತ್ರಿ ಸ್ವಾಗತಿಸಿದರು. ಅವ್ರಿಲ್ ಮಥಾಯಸ್ ನಿರೂಪಿಸಿದರು. ಉಪಪ್ರಾಂಶುಪಾಲ ನಾರಾಯಣ್ ಚಾರು ವಂದಿಸಿದರು.

















