UN NETWORKS
ತೊಕ್ಕೊಟ್ಟು : ಕೃಷಿ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಇಂದಿನ ಯುವ ಪೀಳಿಗೆಗೆ ಕೃಷಿಯತ್ತ ಸೆಳೆಯುವ ಕಾರ್ಯ ಆಗಬೇಕಾಗಿದ್ದು. ಈ ನಿಟ್ಟಿನಲ್ಲಿ ಸೇವಾ ಭಾರತಿಯಂತಹ ಸಂಸ್ಥೆಗಳು ಆಟದೊಂದಿಗೆ ಕೃಷಿ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಚರ್ಚ್ನ ಧರ್ಮಗುರು ರೆ| ಡಾ| ಜೋನ್ ಬಾಪ್ಟಿಸ್ಟ್ ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಸಮೀಪದ ಅಂಬಿಕಾರೋಡು ಬಾರ್ದೆ ಮಲರಾಯ ದೈವಸ್ಥಾನದ ಎದುರಿನ ಗದ್ದೆಯಲ್ಲಿ ರವಿವಾರ ಸೇವಾಭಾರತಿ ಉಳ್ಳಾಲ ಕ್ಷೇತ್ರ ಸಮಿತಿ ಆಶ್ರಯದಲ್ಲಿ “ಕೃಷಿಯೆಡೆಗೆ ನಮ್ಮ ನಡೆ” ಕೆಸರ್ದ ಕಂಡೊಡು ಗೊಬ್ಬುಗ ಬಲೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕೃಷಿ ಸಂಸ್ಕೃತಿಯ ಪರಿಚಯ ಮಾಡುತ್ತಿದ್ದರು. ಆದರೆ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಸಂಸ್ಕೃತಿ ಆಧುನಿಕ ತಂತ್ರಜ್ಞಾನ ಯುಗದಿಂದ ಇಂದಿನ ಯುವ ಪೀಳಿಗೆ ಮರೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಮಕ್ಕಳಿಗೆ ಕೃಷಿ ಪಾಠದ ಅಗತ್ಯವಿದ್ದು ಗ್ರಾಮೀಣ ಪ್ರದೇಶದ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಂದ ಕೃಷಿ ಸಂಸ್ಕøತಿಯನ್ನು ಉಳಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಕೃಷಿ ಪ್ರಧಾನವಾಗಿದ್ದ ನಮ್ಮ ಜಿಲ್ಲೆಯಲ್ಲಿ ಹಿಂದೆ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ನಡೆಸಲಾಗುತ್ತಿತ್ತು. ಆದರೆ ಇಂದು 15 ಸಾವಿರ ಹೆಕ್ಟೇರ್ ಕೃಷಿ ಮಾತ್ರ ನಡೆಯುತ್ತಿದ್ದು, ಕೃಷಿ ಪ್ರದೇಶಗಳು ವಾಣಿಜ್ಯ, ಜನವಸತಿ ಪ್ರದೇಶವಾಗಿ ಮಾರ್ಪಾಡುತ್ತಿರುವುದು ಕಳವಳಕಾರಿಯಾಗಿದ್ದು, ಉಳಿದಿರುವ ಕೃಷಿ ಭೂಮಿಯನ್ನು ಉಳಿಸಿಕೊಂಡು ಹೋಗುವ ಕಾರ್ಯ ಆಗಬೇಕು ಎಂದರು. ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಆತಿಥಿಗಳಾಗಿ ಬೀಜಗುರಿ ಗೋವನಿತಾಶ್ರಯ ಟ್ರಸ್ಟ್ ಸಂಚಾಲಕ ಡಾ| ಪಿ. ಅನಂತಕೃಷ್ಣ ಭಟ್ , ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ದಕ್ಷಿಣ ಭಾರತ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿ ನಾಗೇಶ್ ಆಚಾರ್, ಉದ್ಯಮಿ ರೋಹಿತ್ ಕುಲಾಲ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸೀತಾರಾಮ ಬಂಗೇರ, ಬಿಜೆಪಿ ಮುಖಂಡ ದೇವದಾಸ್ ಕೊಲ್ಯ, ಕ್ರೀಡಾಕೂಟ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಬಯಲಮೂಲೆ, ಅಧ್ಯಕ್ಷ ದಿವಾಕರ ಬಗಂಬಿಲ, ಪೂವಪ್ಪ ಬಾರ್ದೆ, ಟೆಲ್ಲಿಸ್ ಕುಟಿನ್ಹಾ ಉಪಸ್ಥಿತರಿದ್ದರು.
ರವಿ ಅಸೈಗೋಳಿ ಸ್ವಾಗತಿಸಿದರು. ಬಿ. ನಾರಾಯಣ ಕುಂಪಲ ಪ್ರಸ್ತಾವನೆಗೈದರು. ಅಶಿಕ್ ಮಾಡೂರು ಮತ್ತು ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ತೊಕ್ಕೊಟ್ಟು ವಂದಿಸಿದರು.


