UN NETWORKS
ಇನೋಳಿ: ಪದವಿ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿಗಾಗಿ ವ್ಯವಹಾರಿಕ ಜಗತ್ತಿಗೆ ಕಾಲಿಡುತ್ತಿದ್ದು ಅಲ್ಲಿ ಯಾವುದೇ ತಪ್ಪುಗಳನ್ನು ನಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಯಾವುದೇ ಸಣ್ಣ ತಪ್ಪುಗಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಹಾಗೆಯೇ ನಾವು ಪದವೀಧರರು ಎಂಬ ಪ್ರತಿಷ್ಠೆಯನ್ನು ಮೆರೆಯದೆ ಪ್ರತಿಯೊಬ್ಬರಿಗೂ ಗೌರವಿಸುವ ಮನೋಭಾವ ಇಟ್ಟುಕೊಳ್ಳಬೇಕು ಎಂದು ಸುರತ್ಕನ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ. ಕೆ. ಉಮಾ ಮಹೇಶ್ವರ ರಾವ್ ಅಭಿಪ್ರಾಯಪಟ್ಟರು.
ಮಂಗಳೂರು ಇನೋಳಿಯ ಬ್ಯಾರೀಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಕ್ಯಾಂಪಸ್‍ನಲ್ಲಿ ನಡೆದ ಬಿಐಟಿಯ ಐದನೇ ವರ್ಷದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಿಕ್ಸೂಚಿ ಭಾಷಣಗೈದ ಸೌದಿ ಅರೇಬಿಯಾದ ಕಿಂಗ್ ಫ್ಹಾದ್ ಪೆಟ್ರೋಲಿಯಂ ಆ್ಯಂಡ್ ಮಿನರಲ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಕಮ್ಯುನಿಕೇಶನ್ ಆ್ಯಂಡ್ ಐಟಿ ರಿಸರ್ಚ್, ಸೆಂಟರ್ ಫಾರ್ ಎಕಾನಮಿಕ್ಸ್ ಆ್ಯಂಡ್ ಮೆನೇಜ್‍ಮಂಟ್ ಸಿಸ್ಟಮ್ಸ್ ನ ನಿರ್ದೇಶಕ ಡಾ. ಸಾದಿಕ್ ಸೈದ್ ಮಹಮ್ಮದ್ ಸಂಸ್ಥೆಗಳು ಉದ್ಯೋಗಿಗಳ ಜ್ಞಾನಕ್ಕಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಎಲ್ಲರೂ ಏಕಭಾವದಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‍ನ ಅಧ್ಯಕ್ಷ ಸಯ್ಯಿದ್ ಮೊಹಮ್ಮದ್ ಬ್ಯಾರಿ ಮಾತನಾಡಿ ಪದವಿ ಪ್ರದಾನ ಎಂಬುದು ಸಂಭ್ರಮದಷ್ಟೇ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಬೀಳ್ಕೊಡುವ ವಾತಾವರಣ. ಎಂಜಿನಿಯರಿಂಗ್ ಕಾರ್ಯಕ್ಷೇತ್ರದಲ್ಲಿ ಪದವಿ ಎಂಬುದು ಗುರುತಿಸಿಕೊಳ್ಳುವಂತದ್ದಲ್ಲ. ಆದರೆ ಕೌಶಳ್ಯ ಅತಿ ಮುಖ್ಯವಾಗುತ್ತದೆ. ಸತ್ಯಮೇವ ಜಯತೆ ಎಂಬ ಸಂದೇಶದಡಿಯಲ್ಲಿ ಸತ್ಯವನ್ನೇ ಹೇಳುವಂತಹ ಗುಣವನ್ನು ಮೈಗೂಡಿಸಿಕೊಳ್ಳಿ ಎಂದು ನುಡಿದರು.
ಶ್ನೇ ಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಭಾರತ ಎಚ್‍ಆರ್ ಸರ್ವೀಸಸ್ ಗ್ಲೋಬಲ್ ಹಬ್ ಉಪಾಧ್ಯಕ್ಷ ಶ್ರೀನಿವಾಸ ಶೂರಪಾಣಿ ಅವರು ಉದ್ಯಮ- ಶೈಕ್ಷಣಿಕ ಸಂಬಂಧ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 2017ನೇ ಬ್ಯಾಚ್‍ನ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ಸ್ ವಿಭಾಗಗಳ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಸಾಧನೆಗೈದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮಹಮ್ಮದ್ ಪಾಝಿಲ್, ಕಂಪ್ಯೂಟರ್ ಸೈನ್ಸ್‍ನ ಮಹಮ್ಮದ್ ಶೇರಾಝ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ಸ್‍ನ ಆಯೆಶಾ ಫರ್ಹಾನ, ಮಾಹಿತಿ ತಂತ್ರಜ್ಞಾನ ವಿಭಾಗದ ರಿಝ್ಮಾ ಬಾನು ಹಾಗೂ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಇಂಚರ ಪ್ರಶಸ್ತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಗ್ರೂಪ್‍ನ ಟ್ರಸ್ಟಿ ಮಝರ್ ಎಸ್. ಬ್ಯಾರಿ ಪದವೀಧರರಿಗೆ ಸ್ಮರಣಿಕೆ ವಿತರಿಸಿದರು.ಹಿರಿಯ ಸಲಹೆಗಾರ ಡಾ.ಎಸ್.ಕೆ. ರಾಯ್ಕರ್, ಡಾ. ಅಜೀಝ್ ಮುಸ್ತಫಾ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಆಂಟನಿ ಎ.ಜೆ. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರುಕ್ಸಾನ ಹಾಗೂ ಝುಲ್ಕರ್ ನೈನ್ ಕಾರ್ಯಕ್ರಮ ನಿರೂಪಿಸಿದರು. ಪ್ರೋ. ಮುಸ್ತಫಾ ಬಸ್ತಿಕೋಡಿ ವಂದಿಸಿದರು.






