UN NETWORKS
ಕೊಣಾಜೆ: ಇಂದಿನ ಆಧುನಿಕ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಬಹಳಷ್ಟು ಅಭಿವೃದ್ದಿಯನ್ನು ಕಾಣುತ್ತಿದ್ದರೂ ಇದರ ವ್ಯಾಪ್ತಿಯು ದೇಶದ ಮೂಲೆ ಮೂಲೆಗೆ ಇನ್ನೂ ತಲುಪಿಲ್ಲ. ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ದಿ ಯೋಜನೆಗಳು ಪ್ರತಿಯೊಬ್ಬರಿಗೂ ಹಾಗೂ ದೇಶದ ಉದ್ದಗಲಕ್ಕೂ ತಲುಪುವಲ್ಲಿ ಇಂತಹ ವಿಚಾರ ಸಂಕಿರಣಗಳು ಪೂರಕವಾಗಲಿ ಎಂದು ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವರಾದ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳ ಹಾಗೂ ಭಾರತೀಯ ವಿಜ್ಞಾನ ಪರಿಷತ್ ಬೆಂಗಳೂರು ಇದರ ಆಶ್ರಯದಲ್ಲಿ `ರೀಚಿಂಗ್ ಆಂಡ್ ಅನ್‍ರೀಚ್‍ಡ್ ಥ್ರೂ ಸೈಯನ್ಸ್ ಆಂಡ್ ಟೆಕ್ನಾಲಜಿ’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಶುಕ್ರವಾರ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಅಭಿವೃದ್ಧಿಯಲ್ಲಿ ಪ್ರಧಾನವಾದ ಪಾತ್ರವಹಿಸುತ್ತದೆ. ಆದರೂ ಕೂಡಾ ಈ ಕ್ಷೇತ್ರದಲ್ಲಿ ನಿರೀಕ್ಷಿತ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ವಿಜ್ಞಾನಿಗಳು ಹಾಗೂ ಸಂಶೋಧಕರು ಹೆಚ್ಚೆಚ್ಚು ಸಂಶೋಧನಾ ಕಾರ್ಯ ಯೋಜನೆಗಳ ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕಾಗಿದೆ. ಮಂಗಳೂರು ವಿವಿಯಲ್ಲಿ ಎರಡು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾನ್ಪುರದ ಭಾರತೀಯ ವಿಜ್ಞಾನ ಪರಿಷತ್‍ನ ಮಾಜಿ ಅಧ್ಯಕ್ಷರಾದ ಡಾ.ಅಶೋಕ್ ಕುಮಾರ್ ಸಕ್ಸೇನ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ವಹಿಸಿ ಮಾತನಾಡಿದರು.
ವಿಚಾರಸಂಕಿರಣದ ಕುರಿತು ರೂಪು ರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಪದ್ಮಶ್ರೀ ಡಾ.ಲಾಲ್‍ಜಿ ಸಿಂಗ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾನ್ಪುರದ ಭಾರತೀಯ ವಿಜ್ಞಾನ ಪರಿಷತ್‍ನ ಮಾಜಿ ಕಾರ್ಯದರ್ಶಿ ಡಾ.ವಿಜಯ ಲಕ್ಷ್ಮೀ ಸಕ್ಸೇನ, ಭಾರತೀಯ ವಿಜ್ಞಾನ ಪರಿಷತ್‍ನ ಕಾರ್ಯದರ್ಶಿ ಪ್ರೊ.ಗಂಗಾಧರ್, ಪ್ರೊ.ಪಿ.ಪಿ.ಮಧು, ಭಾರತೀಯ ವಿಜ್ಞಾನ ಪರಿಷತ್‍ನ ಅಧ್ಯಕ್ಷರಾದ ಡಾ.ಮನೋಜ್ ಕುಮಾರ್ ಚಕ್ರಬರ್ತಿ, ಕೋಶಾಧಿಕಾರಿ ಪ್ರೊ.ರಂಜಿತ್ ಕುಮಾರ್ ವರ್ಮಾ, ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್, ಕಾರ್ಯಕ್ರಮದ ಸಂಯೋಜಕರಾದ ಡಾ.ಎಸ್.ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಎಸ್.ಮುಸ್ತಾಕ್, ಕಾರ್ಯಕ್ರಮದ ಸಂಘಟಕರಾದ ಪ್ರೊ.ಮುಂಜುನಾಥ ಪಟ್ಟಾಬಿ, ಸಂಖ್ಯಾಶಾಸ್ತ್ರ ವಿಭಾಗದ ಪ್ರೊ.ಇಸ್ಮಾಯಿಲ್, ಸಾಗರ ಭೂ ವಿಜ್ಞಾನ ವಿಭಾಗದ ಪ್ರೊ.ಬಿ.ಆರ್.ಮಂಜುನಾಥ್, ರಸಾಯನ ಶಾಸ್ತ್ರ ವಿಭಾಗದ ಪ್ರೊ.ಬೋಜ ಪೂಜಾರಿ, ಭೌತಶಾಸ್ತ್ರ ವಿಭಾಗದ ಪ್ರೊ.ವೈ ನಾರಾಯಣ್, ಪ್ರೊ.ಮೋನಿಕಾ ಸದಾನಂದ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


