UN NETWORKS
ಉಳ್ಳಾಲ: ವಿಶ್ವದಾದ್ಯಂತ ಸ್ಪೇನ್ ದೇಶ ಅಂಗಾಂಗ ದಾನಗಳಲ್ಲಿ ಮುಂಚೂಣಿಯಲ್ಲಿದ್ದು, ಭಾರತ ದ್ವಿತೀಯ ಸ್ಥಾನವನ್ನು ಹೊಂದಿದೆ. ಇಲ್ಲಿ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಕಿಡ್ನಿ ಫೆಡರೇಷನ್ ಆಫ್ ಇಂಡಿಯಾದ ಚೇರ್‍ಮೆನ್ ಫಾ.ಡೇವಿಸ್ ಚಿರಾಮೆಲ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯಗಳು ಅಂಗಾಂಗ ದಾನಗಳ ಕುರಿತ ಜಾಗೃತಿಯನ್ನು ಮಾಸಿಕವಾಗಿ ಹಮ್ಮಿಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳಲ್ಲಿ ಅಂಗಾಂಗ ದಾನಗೈದವರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿಸಿ, ಅವರನ್ನು ಗೌರವಿಸುವಂತಹ ಕೆಲಸವೂ ಆಗಬೇಕಿದೆ. ಸ್ವಾರ್ಥ ಸಮಾಜದಲ್ಲಿ ಸಾವು ಸಂಭವಿಸಿದ ನಂತರ ಎಲ್ಲರೂ ನಿಸ್ವಾರ್ಥಿಗಳಾಗುತ್ತಿದ್ದಾರೆ. ಆದರೆ ಅಂಗಾಂಗ ದಾನ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೂ ಕಣ್ಣೀರು ಹಾಕುವಂತಹ ಪ್ರಮೇಯವೂ ದಾನಿಗಳಿಂದ ನಡೆಯುತ್ತಿದೆ. ಸ್ವಾರ್ಥವಿದ್ದಲ್ಲಿ ನಿಶ್ಶಕ್ತಿ ಇರುತ್ತದೆ, ನಿಸ್ವಾರ್ಥವಿದ್ದಲ್ಲಿ ಶಕ್ತಿ ಹೆಚ್ಚಾಗುವುದು. ಸಾವು ನಂತರ ಅಂಗಾಂಗ ದಾನಗೈಯ್ಯುವ ಮೂಲಕ 10 ಜನರಿಗೆ ಖುಷಿಯನ್ನು ನೀಡಿದಲ್ಲಿ ಯಾವುದನ್ನೂ ಕಳೆದುಕೊಳ್ಳುವುದಿಲ್ಲ. ಮಾನವೀಯತೆಯುಳ್ಳ ಸಮಾಜದಲ್ಲಿ ಪರಸ್ಪರ ಸಹಕರಿಸುವ ಮೂಲಕ ಎಲ್ಲರೂ ಬಾಳಬೇಕಿದೆ ಎಂದರು.
ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್ ಶೃತಿ ಮಾತನಾಡಿ ಅಂಗಾಂಗ ದಾನಗಳ ವಿಚಾರಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳಿವೆ. ಅಂಗ ದಾನದಲ್ಲಿ ಹಣ ಮಾಡುವ ದಂಧೆಯೂ ಇದೆ. ಆದರೆ ಅಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದೆ ಮೆದುಳಿನ ಸಾವು, ಹೃದಯಾಘಾತಕ್ಕೊಳಗಾದವರ ಅಂಗಗಳನ್ನು ದಾನ ಮಾಡುವುದರಿಂದ ಹಲವರನ್ನು ಬದುಕಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಅಬ್ದುಲ್ಲಾ ಕುಂಞ ಮಾತನಾಡಿ ಅಂಗದಾನ ಎಂಬುದು ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ. ಅಂಗಗಳ ಕೊರತೆಯಿಂದ ಹಲವರ ಸಾವುಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಅಂಗದಾನ ಕುರಿತು ಹೆಚ್ಚಿನ ಪ್ರಚಾರಪಡಿಸುವ ಅವಶ್ಯಕತೆ ಇದೆ ಎಂದರು. ಉದ್ಯಮಿ ಲಾಲ್ ಗೋಯೆಲ್, ಕುಲಸಚಿವ ಡಾ. ಶ್ರೀಕುಮಾರ್ ಮೆನನ್ , ಯೂರೋಲಾಜಿ ವಿಭಾಗದ ಪ್ರೋಫೆಸರ್ ಡಾ. ಮುಜೀಬ್ ರಹಮಾನ್ ಮುಖ್ಯ ಅತಿಥಿಗಳಾಗಿದ್ದರು. ಡಾ. ಸಂತೋಷ್ ಪೈ ಸ್ವಾಗತಿಸಿದರು. ಡೆನಿಸನ್ ಹಾಗೂ ಜುಮಾ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್
ಆಧಾರ್ ಕಾರ್ಡುಗಳಲ್ಲಿ ಅಂಗದಾನ ಮಾಡುವವರ ವಿವರ ದಾಖಲಿಸಬೇಕಿದೆ. ಲೈಸೆನ್ಸ್ ಪಡೆಯುವ ಯುವಸಮುದಾಯಕ್ಕೆ ಕಡ್ಡಾಯ ಅಂಗಾಂಗ ದಾನ ಮಾಡುವಂತೆ ಸರಕಾರ ಸೂಚಿಸಬೇಕಿದೆ. ಇದರಿಂದ ಅಪಘಾತದ ಜಾಗೃತಿ ಮೂಡುವುದರ ಜತೆಗೆ ವಾಹನಗಳನ್ನು ಮಿತಿಯಲ್ಲಿ ಕೊಂಡೊಯ್ಯುವಂತೆ ಮಾಡುವುದು. ರಾಜ್ಯ ಸರಕಾರ ಅಂಗದಾನಿಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಬೇಕು. ತೆರಿಗೆ ಪಾವತಿಯಲ್ಲಿಯೂ ಅಂಗದಾನಿಗಳಿಗೆ ವಿನಾಯಿತಿ ನೀಡಬೇಕು.
ಲಾಲ್ ಗೋಯೆಲ್
ಉದ್ಯಮಿ



