UN NETWORKS
ಕೊಣಾಜೆ: ಭಾರತೀಯ ಸಮಾಜ ಸುಧಾರಕರನ್ನು ಕೇವಲ ಒಂದು ಸಮುದಾಯಕ್ಕೆ ಬ್ರ್ಯಾಂಡ್ ಮಾಡಬಾರದು. ನಾರಾಯಣಗುರುಗಳು, ಬಸವಣ್ಣ, ಅಂಬೇಡ್ಕರ್ ಕೂಡಾ ಸಮಾಜ ಸುಧಾರಕರೇ ಆಗಿದ್ದು ಅವರೆಲ್ಲರ ಕಥೆಯೂ ಅದೇ ಆಗುತ್ತಿದೆ. ಸಮಾಜದ ಬದಲಾವಣೆ ಕಾಣಬೇಕಾದರೆ ಸಮಾಜ ಸುಧಾರಕರು ಕೆಲವೊಂದು ಹೆಗ್ಗುರುತು ಬಿಟ್ಟು ಹೋಗಿದ್ದು ಅದು ಅವರ ಹೆಸರನ್ನು ಶಾಶ್ವತವಾಗಿಡುತ್ತದೆ ಎಂದು ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರೋಫೆಸರ್ ಸುರೇಂದ್ರ ರಾವ್ ಹೇಳಿದ್ದಾರೆ.
ಮಂಗಳೂರು ವಿವಿಯ ಬ್ರಹ್ಮ ಶ್ರೀ ನಾರಾಯಣಗುರು ಅಧ್ಯಯನ ಪೀಠದ ಆಶ್ರಯದಲ್ಲಿ ವಿವಿಯ ಆಡಳಿತ ಸೌಧದ ನೂತನ ಸೆನೆಟ್ ಹಾಲ್ ನಲ್ಲಿ ಬುಧವಾರ ನಡೆದ ನಾರಾಯಣಗುರು ಜಯಂತಿ-2017 ರಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಇಡೀ ಸಮಾಜವನ್ನು ಹೊಸದಾಗಿ ಕಟ್ಟಿದ ಹೊಂದಿಸಿದ ಕೀರ್ತಿ ನಾರಾಯಣಗುರುಗಳದ್ದಾಗಿದೆ. ಒಂದೇ ಜಾತಿ ಒಂದೇ ಧರ್ಮ ಎಂದು ಹೇಳಿದವರು ಕೇವಲ ಒಂದು ಸಮುದಾಯದ ಗುರುಗಳಲ್ಲ. ಅವರ ಆದರ್ಶ ಇಡೀ ಸಮಾಜಕ್ಕೆ ಬೇಕಾಗಿದ್ದು ಅವರು ಇಡೀ ಸಮಾಜಕ್ಕೆ ಗುರುಗಳು ಎಂದರು.
ಎಷ್ಟೋ ಕಡೆಯಲ್ಲಿ ದೇವಸ್ಥಾನದಲ್ಲಿ ಇಂದ ಇಂದಿಗೂ ಪಂಕ್ತಿಬೇಧ ನಡೆಯುತ್ತಿದೆ. ಆ ಕಾಲದಲ್ಲಿ ಕೇರಳದಲ್ಲಿ ಸಮಾಜದಲ್ಲಿ ಅತಿರೇಕ , ಕಲ್ಮಶ, ಸಾಮಾಜಿಕ ಪಿಡುಗುಗಳು, ಜಾತಿ ವ್ಯವಸ್ಥೆ, ತಾರತಮ್ಯ ಬಹಳಷ್ಟಿದ್ದುದರಿಂದ ಅವೆಲ್ಲವನ್ನು ಹೋಗಲಾಡಿಸಲು ಶಿಕ್ಷಣವೇ ಶಕ್ತಿ ಎಂದು ನಾರಾಯಣಗುರುಗಳು ಸಾರಿದ ಫಲ ಸಮಾಜ ಸುಶಿಕ್ಷಿತವಾಗಲು ಸಾಧ್ಯವಾಯಿತು ಎಂದರು.
ಅಸ್ಪ್ರಶ್ಯತೆಯಲ್ಲೂ ವಿವಿಧ ಹಂತಗಳಿತ್ತು. ಸಮಾನತೆ ಬಾಯಿಮಾತಿಗೆ ಸೀಮಿತವಾಗಿದೆ. ಇಂದಿಗೂ ಅರ್ಜಿಗಳಲ್ಲಿ ಜಾತಿ ಉಲ್ಲೇಖಿಸದಿದ್ದರೆ ಗುರುತಿಸದ ಸ್ಥಿತಿ ಇದೆ. ಸಮಾನತೆ ಪಾಲಿಸಿದರೆ ತನ್ನ ಯೋಗ್ಯತೆಗೆ ಧಕ್ಕೆ ತರುತ್ತದೆ ಎಂಬ ಭಾವನೆಯನ್ನು ತೊಡೆದುಹಾಕಲು ಬಹಳಷ್ಟು ಶ್ರಮಿಸಿದರು ಎಂದರು.
ಮುಖ್ಯ ಅತಿಥಿಗಳಾಗಿ ಎಂ.ಎಸ್. ಕೋಟ್ಯಾನ್ ಹಾಗೂ ನಿವೃತ್ತ ಪ್ರಾಧ್ಯಾಪಕಿ ಬಿ.ಎಂ. ರೋಹಿಣಿ ಉಪಸ್ಥಿತರಿದ್ದರು.
ಕುಲಸಚಿವ ಪ್ರೋ.ಕೆ.ಎಂ. ಲೋಕೇಶ್ ಸ್ವಾಗತಿಸಿ ಐರೋಪ್ಯರ ಆಡಳಿತವಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಹಲವು ಮಂದಿ ಶ್ರಮಿಸಿದ್ದು ನಾರಾಯಣಗುರುಗಳ ಹೋರಾಟ ಭಿನ್ನವಾಗಿದ್ದು ಅವರ ಆದರ್ಶ ತತ್ವ ಸಿದ್ದಾಂತ ಎಲ್ಲ ಕಾಲಕ್ಕೂ ಅನುಕರಣೀಯ ಎಂದರು.
ಶ್ರೀದೇವಿ ಪ್ರಾರ್ಥನೆ ಯ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ನಾರಾಯಣಗುರು ಪೀಠದ ಸಂಯೋಜಕ ಮುದ್ದು ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು.
*ಜಾತಿ ವ್ಯವಸ್ಥೆ, ಅಸ್ಪಶ್ಯತೆ ಬಗ್ಗೆ ಬಹಳ ಕಷ್ಟ ಅನುಭವಿಸಿದಾಗ ನಾರಾಯಣಗುರುಗಳು ಶಿವಗಿರಿಯಲ್ಲಿ ಶಿವನ ವಿಗ್ರಹ ಸ್ಥಾಪಿಸಿದಾಗ ಬ್ರಾಹ್ಮಣರಿಂದ ವ್ಯಾಪಕ ಟೀಕೆ ಎದುರಾಯಿತು. ಅದಕ್ಕೆ ನಾರಾಯಣಗುರುಗಳು ಹೇಳಿದ ಮಾತು ಇದು ಬ್ರಾಹ್ಮಣರು ಪೂಜಿಸುವ ಶಿವನಲ್ಲ, ಈಳವರ ಶಿವ ಎಂದು ಸರಳವಾಗಿ ಮಾರ್ಮಿಕವಾಗಿ ಉತ್ತರ ಕೊಟ್ಟ ಪರಿ ಒಟ್ಟು ಸಮಾಜವನ್ನೇ ನಿಬ್ಬೆರಗಾಗಿಸಿತ್ತು.
ಸುರೇಂದ್ರ ರಾವ್




