UN NETWORS
ಕೊಣಾಜೆ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕೊಣಾಜೆಯಲ್ಲಿ ಬಡ ಯಕ್ಷ ಕಲಾವಿದನ ಮನೆ ಧರೆಗೆ ಉರುಳಿತ್ತು. ತಾನು ಹಾಗೂ ಸಹೋದರಿ ವಾಸವಾಗಿದ್ದ ಮನೆ ಕುಸಿದು ಬಿದ್ದ ಪರಿಣಾಮ ಕಲಾವಿದ ದೇವಪ್ಪ ಗೌಡ ಉಳಿದುಕೊಳ್ಳಲು ಸೂರು ಇಲ್ಲದೆ ಕಂಗೆಟ್ಟು ಹೋಗಿದ್ದರು. ಇದೀಗ ದೇವಪ್ಪ ಗೌಡರವರಿಗೆ ನೂತನ ಮನೆಯೊಂದನ್ನು ನಿರ್ಮಿಸಲು ಕಟೀಲು ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂದಾಗಿದ್ದು ನೂತನ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಕೊಣಾಜೆಯ ಅಣ್ಣೆರೆಪಾಲು ಎಂಬಲ್ಲಿ ಪುಟ್ಟ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಕುಡುಂಬಿ ಜನಾಂಗದ ದೇವಪ್ಪ ಗೌಡರ ಹರಕಲು ಹಂಚಿನ ಮನೆಯು ಕಳೆದ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಪರಿಣಾಮ ದೇವಪ್ಪ ಕುಟುಂಬಸ್ಥರು ಬೀದಿಗೆ ಬಿದ್ದಿದ್ದರು. ಕಟೀಲು ಯಕ್ಷಗಾನ ಮೇಳದಲ್ಲಿ ಚೌಕಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಕೋಡಂಗಿಯ ವೇಷವನ್ನು ಧರಿಸುತ್ತಿದ್ದ ದೇವಪ್ಪರಿಗೆ ಮತ್ತೆ ಮನೆ ಕಟ್ಟಲು ಹಣವಿರಲಿಲ್ಲ. ವಿಷಯ ತಿಳಿದ ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲರವರು ಇದೀಗ ತನ್ನ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ವತಿಯಿಂದ ದೇವಪ್ಪರಿಗೆ ನೂತನ ಮನೆ ನಿರ್ಮಿಸಲು ಮುಂದಾಗಿದ್ದು ವೇದಮೂರ್ತಿ ತಿರುಮಲೇಶ್ ಭಟ್ ಅವರ ಪೌರೋಹಿತ್ಯದಲ್ಲಿ ಶನಿವಾರದಂದು ಮನೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್‍ನ ಅಧ್ಯಕ್ಷರಾದ ಸತೀಶ್ ಪಟ್ಲರವರ ಸೇವೆ ದೇವರು ಮೆಚ್ಚುವಂತದ್ದು.ಬಡ ಯಕ್ಷಗಾನ ಕಲಾವಿದರಿಗೆ ಮನೆ ಕಟ್ಟಿಕೊಡುವ ಅವರ ಕನಸು ನನಸಾಗಿ ಜಿಲ್ಲೆಯಲ್ಲದೆ ರಾಜ್ಯಾದ್ಯಂತ ಸಾವಿರ ಮನೆ ಕಟ್ಟುವಂತಾಗಲೆಂದು ಹಾರೈಸಿದರು.
ಯಕ್ಷಾಶ್ರಯ ಯೋಜನೆಯ ಪ್ರಥಮ ಮನೆ:
ಯಕ್ಷಧ್ರುವ ಪಟ್ಲ ಫೌಂಡೇಶನ್‍ನಿಂದ ಜಿಲ್ಲೆಯ ಬಡ ಯಕ್ಷಗಾನ ಕಲಾವಿದರಿಗೆ 100 ಮನೆ ಕಟ್ಟಿ ಕೊಡುವ ಮಹತ್ವಾಕಾಂಕ್ಷೆಯ “ಯಕ್ಷಾಶ್ರಯ”ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಅದರ ಭಾಗವಾಗಿ ಮೊದಲ ಮನೆಯನ್ನು ಕೊಣಾಜೆಯ ದೇವಪ್ಪ ಗೌಡರಿಗೆ ನಿರ್ಮಿಸಿ ಕೊಡಲಾಗುತ್ತಿದ್ದು,ಬಡ ಯಕ್ಷಗಾನ ಕಲಾವಿದರ ಸಹಾಯಕ್ಕೆ ಸಮಾಜದ ಎಲ್ಲಾ ವರ್ಗದ ಜನರು ಸಹಯ ಹಸ್ತ ಚಾಚುವಂತೆ ಸತೀಶ್ ಪಟ್ಲರು ಭಿನ್ನವಿಸಿಕೊಂಡರು.
ಪಟ್ಲ ಫೌಂಡೇಶನ್‍ನ ಕಾರ್ಯದರ್ಶಿಗಳಾದ ಪುರುಷೋತ್ತಮ್ ಭಂಢಾರಿ ಅಡ್ಯಾರು, ಕೋಶಾಧಿಕಾರಿ ಸಿ.ಎ ಸುದೇಶ್ ಕುಮಾರ್, ಸದಸ್ಯರಾದ ಸತೀಶ್ ಶೆಟ್ಟಿ ಎಕ್ಕಾರ್, ಅಶ್ವಿತ್ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ, ರಾಮಚಂದ್ರ, ಗೋವಿಂದ ಗೌಡ, ಪ್ರಕಾಶ್ ಶೆಟ್ಟಿ ಸ್ಥಳೀಯ ಬಿಜೆಪಿ ಸಮಿತಿ ಅಧ್ಯಕ್ಷ ಸನತ್ ಕುಮಾರ್, ಮುಖಂಡರಾದ ರಿತೇಶ್ ಶೆಟ್ಟಿ ಹೊಸಮನೆ, ಶೇಖರ್ ಕೊಪ್ಪಳ, ನರ್ಸು ಗೌಡ, ಗೋಪಾಲ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಬಡತನದಿಂದ ಕಂಗೆಟ್ಟು ಹೋಗಿದ್ದ ನನ್ನ ಕುಟುಂಬಕ್ಕೆ ಧಾರಾಕಾರ ಮಳೆ ಸುರಿದು ಮನೆ ಕುಸಿದು ಬಿದ್ದದ್ದು ಆಘಾತವನ್ನೇ ನೀಡಿತ್ತು. ಸೋತು ನಿರ್ಗತಿಕರಾಗಿ ಅಸಹಾಯಕರಾಗಿರುವ ವೇಳೆಯಲ್ಲೇ ಪಟ್ಲ ಫೌಂಡೇಶನ್‍ನವರು ಮುಂದೆ ಬಂದು ನೂತನ ಮನೆ ಕಟ್ಟಲು ಧನಸಹಾಯ ನೀಡಿದ್ದು ನಾನು ಧನ್ಯನಾಗಿದ್ದೇನೆ.
(ದೇವಪ್ಪ ಗೌಡ,ಫಲಾನುಭವಿಗಳು)


