UN NETWORKS
ಉಳ್ಳಾಲ: ದುಷ್ಕರ್ಮಿಗಳಿಂದ ಹತ್ಯೆ ಯತ್ನಕ್ಕೊಳಗಾದ ಚಿರಂಜೀವಿ ಎಂಬ ಯುವಕನ ಚಿಕಿತ್ಸಾ ವೆಚ್ಛ ಮತ್ತು ವೈಯಕ್ತಿಕ ಪರಿಹಾರ ಒದಗಿಸುವಂತೆ ಮತ್ತು ನಿರಂತರ ಚೂರಿ ಇರಿತ ಕೃತ್ಯ ನಡೆಸುವವರನ್ನು ಬಂಧಿಸುವಂತೆ ಆಗ್ರಹಿಸಿ ಡಿ ವೈ ಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೊಣಾಜೆ ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕ್ಷೇತ್ರದ ಸೌಹಾರ್ದತೆಯನ್ನು, ಶಾಂತಿಯನ್ನು ಕೆದಡುವಂತ ಕೃತ್ಯಗಳು ನಡೆಯುತ್ತಿದೆ. ಈಗಾಗಲೇ, ಹಲವು ಕಡೆಗಳಲ್ಲಿ ಮುಗ್ಧ ಯುವಕರ ಮೇಲೆ ದಾಳಿಗಳು ನಡೆದಿದೆ. ಜುಲೈ 8 ರಂದು ರಾತ್ರಿ ಮುನ್ನೂರು ಗ್ರಾಮದ ಕುತ್ತಾರಿನಲ್ಲಿ ಚಿರಂಜೀವಿ ಎಂಬ ಯುವಕನಿಗೆ ಬೈಕಿನಿಂದ ಬಂದ ದುಷ್ಕರ್ಮಿಗಳು ತಲೆಗೆ ಬಲವಾಗಿ ತಲವಾರಿನಿಂದ ಹೊಡೆದು ಪರಾರಿಯಾಗಿದ್ದಾರೆ. ಚಿರಂಜೀವಿಯನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಲೆಗೆ 18 ಹೊಲಿಗೆ ಹಾಕಿದ್ದು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ರೂ.21,000 ಚಿಕಿತ್ಸಾ ವೆಚ್ಚವಾಗಿದ್ದು, ಎರಡು ತಿಂಗಳು ವಿಶ್ರಾಂತಿ ಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದರಿಂದ ಕೆಲಸಕ್ಕೂ ಹೋಗಲು ಸಾಧ್ಯವಾಗದೆ ಕೆಲಸ ಕೂಡ ಕಳೆದುಕೊಂಡಿದ್ದಾರೆ. ಹಾಗಾಗಿ ಅಮಾಯಕ ಹುಡುಗ ಚಿರಂಜೀವಿಗೆ ಚಿಕಿತ್ಸಾ ವೆಚ್ಚವನ್ನು ಮತ್ತು ವೈಯಕ್ತಿಕ ಪರಿಹಾರವನ್ನು ಒದಗಿಸಬೇಕಿದೆ. ಮಾತ್ರವಲ್ಲದೆ, ದಾಳಿ ನಡೆದು ಎರಡು ತಿಂಗಳಾದರೂ, ಚೂರಿ ಇರಿತ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಲಿಲ್ಲ. ಅಲ್ಲದೆ, ಕುತ್ತಾರು ಪ್ರದೇಶದಲ್ಲಿ ಇದಕ್ಕಿಂತ ಮೊದಲು ರಾಮ್‍ಮೋಹನ್ ಮತ್ತು ಗಂಗಾಧರ್‍ರವರ ಮೇಲೆ ಇದೇ ರೀತಿಯ ದಾಳಿಗಳು ನಡೆದಿದೆ. ಹಾಗೂ ಮಂಜನಾಡಿ ಪ್ರದೇಶದಲ್ಲಿ ನವಾಝ್, ಶಮೀರ್ ರವರ ಮೇಲು ಚೂರಿ ಇರಿತ ಕೃತ್ಯ ನಡೆದಿರುತ್ತದೆ. ಈ ಕ್ಷೇತ್ರದ ಸೌಹಾರ್ದತೆಯನ್ನು ಸಹಿಸದ ಮತಾಂದ ಶಕ್ತಿಗಳು ತಮ್ಮ ಕ್ರೌರ್ಯವನ್ನು ಮಕ್ಕಳ ಮೇಲೂ ತೊರಿದ್ದಾರೆ. ಮಂಜನಾಡಿ ಪ್ರದೇಶದಲ್ಲಿ ರಾಝಿಕ್ ಎಂಬ ಮುಗ್ಧ ಹುಡುಗ ಮದರಾಸಕ್ಕೆ ತೆರಳುವಾಗ ಬ್ಲೇಡಿನಿಂದ ಇರಿದಿದ್ದಾರೆ. ಕಿನ್ಯಾ ಪ್ರದೇಶದಲ್ಲೂ ಶಾಲೆ ಬಿಟ್ಟು ಬರುತ್ತಿದ್ದ ಒಂದು ಮಗುವಿನ ಮೇಲೆ ಹಲ್ಲೆ ಮಾಡಿದ್ದಾರೆ.
ಹೀಗೆ ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಚೂರಿ ಇರಿತ ಪ್ರಕರಣಗಳು ನಡೆಯುತ್ತಿದ್ದರೂ, ಪೊಲೀಸ್ ಇಲಾಖೆಯು ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲರಾಗಿದ್ದಾರೆ. ಹಾಗಾಗಿ, ಚೂರಿ ಇರಿತ ನಡೆಸಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಕ್ರಮಕೈಗೊಳ್ಳಬೇಕು ಮತ್ತು ಚೂರಿ ಇರಿತಕ್ಕೊಳಗಾದ ಅಮಾಯಕ ಯುವಕರ ಚಿಕಿತ್ಸಾ ವೆಚ್ಚವನ್ನು ಬರಿಸುವುದರ ಜೊತೆಗೆ ವೈಯಕ್ತಿಕ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಡಿವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಉಳ್ಳಾಲ ವಲಯ ಅಧ್ಯಕ್ಷ ಜೀವನರಾಜ್ ಕುತ್ತಾರ್, ಡಿವೈ ಎಫ್ ಐ ಉಳ್ಳಾಲ ಮುಖಂಡರುಗಳಾದ ಸುನಿಲ್ ತೇವುಲ, ರಫೀಕ್ ಹರೇಕಳ, ದಾಳಿಗೊಳಗಾದ ಚಿರಂಜೀವಿ ಮತ್ತು ಚಿರಂಜೀವಿ ತಂದೆ ನಾಗೇಶ್ ಉಪಸ್ಥಿತರಿದ್ದರು.



