UN NETWORKS
ಉಳ್ಳಾಲ: ಸ್ವಾತಂತ್ರ್ಯದಿನದಂದು ಉಳ್ಳಾಲದಲ್ಲಿ ಅಬ್ಬಕ್ಕ ರಾಣಿಯನ್ನು ಸ್ಮರಿಸುವ ಉದ್ದೇಶದಿಂದ ಮುಂದಿನ ವರ್ಷ ಅರ್ಥಪೂರ್ಣ ಆಚರಣೆಯನ್ನು ನಡೆಸುವ ಉದ್ದೇಶವನ್ನು ಹೊಂದಿದ್ದು, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ದೇಶ ಭಕ್ತರನ್ನು ಗೌರವಿಸುವ ಕೆಲಸ ಅದರ ಮೂಲಕ ಆಗಬೇಕಿದೆ ಎಂದು ಕರಾವಳಿ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.

ಅವರು ಕರಾವಳಿ ಸಾಂಸ್ಕೃತಿಕ ಪರಿಷತ್ ಹಾಗೂ ವಿದ್ಯಾರಣ್ಯ ಕಲಾವೃಂದ ಉಳ್ಳಾಲದ ವತಿಯಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿ ಮಾತನಾಡಿದರು. ಉಳ್ಳಾಲದವರಿಗೆ ದೇಶಕ್ಕಾಗಿ ಸೇವೆಗೈದ ಅಬ್ಬಕ್ಕಳನ್ನು ಆರಾಧಿಸುವ ಅವಕಾಶ ದೊರೆತಿರುವುದು ಸಂತಸದ ವಿಚಾರ. ಸ್ವಾತಂತ್ರ್ಯ ದಿನದಂದು ಅಬ್ಬಕ್ಕ ರಾಣಿಯ ಆಚರಣೆ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ನಡೆಯಬೇಕಿದೆ. ಅದರಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡು ದೇಶ ಸೇವೆಯಲ್ಲಿ ಪಾಲ್ಗೊಂಡವರನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ. ಸೈನಿಕರನ್ನೇ ವಿರೋಧಿಸುವ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ನೀಡಲಾಗಿತ್ತು. ಆದರೆ ಕರಾವಳಿ ಸಾಂಸ್ಕೃತಿಕ ಪರಿಷತ್ , ಸೈನಿಕರನ್ನು ಒಗ್ಗೂಡಿಸಿ ರಾಜ್ಯಪಾಲರಿಗೆ ಹಾಕಿದ ಪತ್ರದ ಫಲವಾಗಿ ಇಂದು ರದ್ದು ಆದೇಶ ದೊರೆತಿರುವುದು ಸೈನಿಕರಿಗೆ ಮತ್ತು ದೇಶಭಕ್ತರಿಗೆ ಸಿಕ್ಕಂತಹ ಯಶಸ್ಸು ಎಂದರು.
ಈ ಸಂದರ್ಭ ನಿವೃತ್ತ ಯೋಧ ವೆಂಕಟೇಶ್ ಕುಂಪಲ, ವಿದ್ಯಾರಣ್ಯ ಕಲಾವೃಂದ ಅಧ್ಯಕ್ಷ ಚೂಡಪ್ಪ ಉಳ್ಳಾಲ, ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟು, ಉಮಾಮಹೇಶ್ವರಿ ದೇವಸ್ಥಾನದ ಮೋಕ್ತೇಸರ ರಘುರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಬಿ.ಜೆ.ಪಿ. ಮೀನುಗಾರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಪ್ರೇಮ್‍ನಾಥ್ ಪುತ್ರನ್, ಬಿ.ಜೆ.ಪಿ. ಕ್ಷೇತ್ರ ಉಪಾಧ್ಯಕ್ಷ ಯಶವಂತ್ ಅಮೀನ್, ಸೋಮೇಶ್ವರ ಪಂ.ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ, ಸದಸ್ಯ ಕಿಶೋರ್ ಕುಂಪಲ, ಪ್ರಮುಖರಾದ ವರ್ಕಾಡಿ ಪದ್ಮನಾಭ ಶೆಟ್ಟಿ, ಉಮಾನಾಥ್ ಉಳ್ಳಾಲ, ಪ್ರವೀಣ್ ಸುವರ್ಣ, ಹರೀಶ್ ಅಂಬ್ಲಮೊಗರು, ರವೀಂದ್ರ ಕುಂಪಲ, ಹರೀಶ್ ಕುಂಪಲ, ಪುಷ್ಪರಾಜ ಉಳ್ಳಾಲ, ಸದಾಶಿವ ಉಳ್ಳಾಲ ಲತೀಫ್ ಕೋಡಿ, ಕುಂಞಮೋನು ಇತರರು ಉಪಸ್ಥಿತರಿದ್ದರು.













