UN NETWORKS
ಉಳ್ಳಾಲ : ಅನುಭವಗಳು ಈಗಿನ ವ್ಯವಸ್ಥೆಗೆ ಸರಿ ಹೊಂದುವುದಿಲ್ಲವೆಂದು ಅರಿತಾಗ, ಈಗಿನ ವಿದ್ಯಾರ್ಥಿಗಳಿಗೆ ಬೇಕಾದ ಜ್ಞಾನವನ್ನು ವೃದ್ಧಿಸಲು ಕಾರ್ಯಗಾರಗಳು ಸಹಕಾರಿಯಾಗುತ್ತದೆ. ಈ ಮೂಲಕ ಬದುಕಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ ಎಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವ ಅಭಿಪ್ರಾಯಪಟ್ಟರು.
ಅವರು ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘ ಇವರ ವತಿಯಿಂದ ಉಳ್ಳಾಲದ ಕೆ.ಪಾಂಡ್ಯರಾಜ ಬಳ್ಳಾಲ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಭೌತಶಾಸ್ತ್ರ ಉಪನ್ಯಾಸಕರಿಗೆ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಉಚಿತ ಪ್ರಾಯೋಗಿಕ ಉಪಕರಣ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ತವ್ಯದ ಒತ್ತಡಗಳ ನಡುವೆ ಜೀವನಕ್ಕೆ ಅರ್ಥವಿರುವುದಿಲ್ಲ. ಈ ಸಮಯದಲ್ಲಿ ಕಾರ್ಯಗಾರಗಳಂತಹ ವಿಶೇಷ ತರಬೇತಿಗಳು ಮನಸ್ಸಿಗೆ ಹಿತ ನೀಡುವುದರಿಂದ ಒತ್ತಡಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಕಾರ್ಯಗಾರಗಳು ಅಧ್ಯಾಪಕ ವೃಂದಕ್ಕೆ ಹೊಸ ಅನುಭವಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸಲು ಸಾಧ್ಯವಾಗುವುದು ಎಂದರು.
ಕೆ.ಪಾಂಡ್ಯರಾಜ ಬಳ್ಳಾಲ್ ಚ್ಯಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಡಾ.ಪ್ರಿಯಾ ಬಳ್ಳಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಪಾಂಡ್ಯರಾಜ ಉಳ್ಳಾಲ ಪದವಿಪೂರ್ವ ಕಾಲೇಜಿನ ಪ್ರಾದ್ಯಾಪಕಿ ಶರ್ಮಿಳಾ ಮುಖೇಶ್ ರಾವ್, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಆನಂದ್, ಉಳ್ಳಾಲ ಪಾಂಡ್ಯರಾಜ ನರ್ಸಿಂಗ್ ಕಾಲೇಜು ವಿಭಾಗ ಮುಖ್ಯಸ್ಥೆ ಕೈನಿ ಸಿಸಿಲಿಯಾ, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಕೋಶಾಧಿಕಾರಿ ವಿನ್ಸೆಂಟ್ ಮಸ್ಕರೇನ್, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಹರೀಶ್ ಸಾತ್ವಿಕ್ ಉಪಸ್ಥಿತರಿದ್ದರು.
ಮಂಗಳೂರು ವಿವಿಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಸರಕಾರಿ ಪದವಿ ಪೂರ್ವ ಕಾಲೇಜು ರಥಬೀದಿ ಇದರ ಉಪನ್ಯಾಸಕಿ ಸರೋಜಿನಿ, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಆನಂದ್ ಹಾಗೂ ವಿವಿಧ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



