UN NETWORKS
ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 57ನೇ ವರ್ಷದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವವು ಆ.14 ರಿಂದ 15ರ ವರೆಗೆ ನಡೆಯಲಿದೆ.
ಆ.14 ರಂದು ಸೋಮವಾರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ತಲಪಾಡಿಯ ಪ್ರಧಾನ ಅರ್ಚಕರಾದ ಗಣೇಶ್ ಭಟ್ ಇವರಿಂದ ಶ್ರೀ ಕ್ರಷ್ಣ ಬೆಳ್ಳಿ ಪ್ರತಿಮೆ ಪ್ರತಿಷ್ಠೆ ನಡೆಯಲಿದೆ.ಆ.15ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ವಿಠೋಭ ರುಕ್ಮಾಯಿ ಮಂದಿರ ತೊಕ್ಕೊಟ್ಟು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10ಗಂಟೆಯಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ “ಮಡಕೆ ಒಡೆಯುವ ಸ್ಪರ್ಧೆ” ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಂಜೆ 7 ಗಂಟೆಗೆ ಅಡಿಕೆ ಏರುವ ಸ್ಪರ್ಧೆ ನಡೆಯಲಿದೆ. ನಾಟ್ಯ ನಿಲಯ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ `ನಾಟ್ಯೋಲ್ಲಾಸಂ’ ನೃತ್ಯ ವೈಭವ ಸಂಜೆ 6ರಿಂದ ನಡೆಯಲಿದೆ. 7.30ಕ್ಕೆ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಿಂದ ತೊಕ್ಕೊಟ್ಟು, ಅಂಬೇಡ್ಕರ್ ರಂಗ ಮಂದಿರಕ್ಕೆ ಶ್ರೀ ಕೃಷ್ಣ ಬೆಳ್ಳಿ ಪ್ರತಿಮೆ ಶೋಭಾಯಾತ್ರೆ ನಡೆಯಲಿದೆ.
ರಾಜ್ಯ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹಾಗೂ ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಮೋನು ಗೌರವ ಉಪಸ್ಥಿತಿಯಲ್ಲಿ ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಆಡಳಿತ ಮೋಕ್ತೇಸರ ವಿಶ್ವನಾಥ ಗಟ್ಟಿ ವಗ್ಗ ಉದ್ಘಾಟಿಸಲಿದ್ದು, ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ತುಳುರಂಗ ಭೂಮಿ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶ್ರೀಕರ ಪ್ರಭು, ಕೊಂಡಾಣ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಮೋಕ್ತೇಸರರಾದ ಕೃಷ್ಣ ಶೆಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಅನಿಲ್ ದಾಸ್, ಸೀತಾರಾಮ ಗಟ್ಟಿ, ಮುರಳಿ ಮೋಹನ್ ಸಾಲ್ಯಾನ್, ರವಿ.ಎಸ್.ಗಾಂಧಿನಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ವರ್ಣ ಚಿತ್ರಗಾರ ಉಮೇಶ್ ಬೋಳಾರ್, ಸಮಾಜ ಸೇವಕ ರೋಹಿತ್ ಸಾಕೂಂಸ್ತ್, ಸಮಾಜ ಸೇವಕ ರಾಝೀಕ್ ಉಳ್ಳಾಲ ಸನ್ಮಾನಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



