UN Networks
ಉಳ್ಳಾಲ: ಪೌರಾಣಿಕ ಹಾಗೂ ಐತಿಹ್ಯದಂತೆ ಮೀನುಗಾರಿಕೆಗೆ ಹೊರಡುವ ಮೊದಲು ಸಮುದ್ರ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಮೂಲಕ ಉತ್ತಮ ಮೀನು ಸಂಪತ್ತು ದೊರೆಯಲಿ ಮತ್ತು ಗಂಗಾ ಸ್ವರೂಪಿ ಸಮುದ್ರ ದೇವಿ ಸುರಕ್ಷತೆಯನ್ನು ನೀಡಲಿ ಎಂದು ಪ್ರಾರ್ಥನೆ ನೆರವೇರಿಸುವ ಮೂಲಕ ಆಚರಿಸಲಾಗಿದೆ ಎಂದು ಮೊಗವೀರ ಸಮಾಜ ಉಳ್ಳಾಲ ಇದರ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಹೇಳಿದರು.
ಅವರು ಉಳ್ಳಾಲ ಮೊಗವೀರಪಟ್ನದ ವಿಠೋಭ ರುಕ್ಮಯಿ ಭಜನಾ ಮಂದಿರದ ಆಶ್ರಯದಲ್ಲಿ ಉಳ್ಳಾಲ ಮೊಗವೀರ ಸಂಘದ ಸಹಾಕರದೊಂದಿಗೆ ಮೊಗವೀರಪಟ್ನದಲ್ಲಿ ಸೋಮವಾರ ಜರಗಿದ 84 ನೇ ವರ್ಷದ ಸಮುದ್ರಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೊಗವೀರ ಸಮಾಜ ಅನಾದಿ ಕಾಲದಿಂದ ಸಮುದ್ರ ಪೂಜೆಯನ್ನು ಆಚರಿಸುತ್ತಿದೆ. ಉಳ್ಳಾಲ ಹೊರತುಪಡಿಸಿ ಉಳಿದೆಡೆ ಬೆಳಿಗ್ಗೆ ಸಮುದ್ರ ಪೂಜೆ ನಡೆಯುತ್ತದೆ.
ಆದರೆ ಉಳ್ಳಾಲದಲ್ಲಿ ಬೆಳಿಗ್ಗೆ ಸೂರ್ಯೋಯದಿಂದ ಸಂಜೆ ಸೂರ್ಯ ಅಸ್ತದ ವರೆಗೆ ಮಂದಿರದಲ್ಲಿ ಭಜನೆ ನೆರವೇರಿಸಿ, ಬಳಿಕ ಸಮುದ್ರ ಪೂಜೆಯನ್ನು ನೆರವೇರಿಸಲಾಗುತ್ತದೆ. ಉಳ್ಳಾಲದಲ್ಲಿ ಮಾತ್ರ ಆಚರಣೆಯು ವಿಭಿನ್ನವಾಗಿದೆ ಎಂದ ಅವರು ಕೃಷಿಕರು ಬೆಳೆ ಬೆಳದ ನಂತರ ದೇವರಿಗೆ ಪೂಜೆ ಸಲ್ಲಿಸಿದರೆ, ಮೊಗವೀರರು ಉತ್ತಮ ಸಂಪತ್ತು ದೊರೆಯಲಿ ಅನ್ನುವ ಆಶಯದೊಂದಿಗೆ ಪೂಜೆ ನೆರವೇರಿಸುತ್ತಾರೆ ಎಂದರು.
ಈ ಸಂದರ್ಭ ಪ್ರಧಾನ ಅರ್ಚಕ ತಾರನಾಥ್ ಸುವರ್ಣ ಪೂಜೆಯನ್ನು ನೆರವೇರಿಸಿದರು. ಮಧ್ಯಸ್ಥರಾದ ಗಂಗಾಧರ ಸುವರ್ಣ, ಮೊಗವೀರ ಸಮಾಜದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ವಿಠೋಭ ರುಕ್ಮಯಿ ಭಜನಾ ಮಂದಿರದ ಅಧ್ಯಕ್ಷ ಗೋವರ್ಧನ್ ಸಾಲ್ಯಾನ್, ಗುರಿಕಾರ ವೃಂದದವರು, ಮಂದಿರದ ಸದಸ್ಯರು ಉಪಸ್ಥಿತರಿದ್ದರು.


































