UN Networks
ಉಳ್ಳಾಲ: ಸರ್ಕಾರದಿಂದ ಬರುವ ಸವಲತ್ತು ಕಟ್ಟಕಡೆಯ ಜನರಿಗೂ ತಲುಪಿಸುವ ಜೊತೆ ಕೆಡುಕುಮುಕ್ತ ಸಮಾಜ ನಿರ್ಮಾಣದಲ್ಲಿ ಸಂಘಟನೆ ತೊಡಗಿಸಿಕೊಂಡು ಜನಮನ್ನಣೆ ಗಳಿಸಲು ಮುಂದಾಗಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಸಯ್ಯದ್ ಮದನಿ ಸೋಶಿಯಲ್ ಫ್ರೆಂಡ್ಸ್(ಎಸ್‍ಎಂಎಸ್‍ಎಫ್) ಸಂಘಟನೆಗೆ ಶುಕ್ರವಾರ ದರ್ಗಾ ವಠಾರದಲ್ಲಿ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.
ಸಮುದಾಯದ ಯುವಕರನ್ನು ಧಾರ್ಮಿಕತೆಯತ್ತ ಸೆಳೆಯುವ ಮೂಲಕ ಮಾದಕ ವಸ್ತುಗಳ ದಾಸರಾಗಿ ದುಷ್ಕೃಂತ್ಯ ಮಾಡುವುದನ್ನು ತಡೆಯುವುದು ಇಂದಿನ ಅವಶ್ಯಕತೆಯಾಗಿದೆ. ಉಳ್ಳಾಲ ಭಾಗದಲ್ಲಿ ಹಿಂದೆ ಇದ್ದಂತಹ ಪರಿಸ್ಥಿತಿ ಇಂದು ಬದಲಾಗಿದೆ ಎನ್ನುವುದು ಪೊಲೀಸರ ವರದಿ ಹೇಳುತ್ತಿದೆ. ಈ ಭಾಗದಲ್ಲಿ ನಿರ್ಮಾಣವಾಗಿರುವ ಉತ್ತಮ ವಾತಾವರಣ ಎಲ್ಲೆಡೆ ನಿರ್ಮಿಸಲು ಸಂಘಟನೆಯ ಸದಸ್ಯರು ಕಾರ್ಯಾಚರಿಸಬೇಕು ಎಂದರು.
ದರ್ಗಾ ಅಧೀನದಲ್ಲಿ ಸಯ್ಯದ್ ಮದನಿ ತಂಙಳ್ ಹೆಸರಲ್ಲಿ ಮದರಸಾ ಪುಸ್ತಕಗಳನ್ನು ಹೊರತರಲಾಗಿದ್ದು ಐದಾರು ಮದರಸಾಗಳಲ್ಲಿ ಮಾತ್ರ ಪಡೆದಿಲ್ಲ. ಇದರಿಂದಾಗಿ ಆ ಪ್ರದೇಶದ ಮಕ್ಕಳು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ದರ್ಗಾ ಆಡಳಿತ ವಿರುದ್ಧ ಆರೋಪ ಮಾಡುತ್ತಾ ದರ್ಗಾವನ್ನು ವಕ್ಫ್ ವಶಕ್ಕೆ ನೀಡಬೇಕೆಂದು ಹೇಳಿ ಉಳ್ಳಾಲ ಚಲೋ ಹಮ್ಮಿಕೊಂಡಿದ್ದು ಅವರಿಗೆ ದೇವನು ಬುದ್ಧಿ ಕರುಣಿಸಲಿ ಎಂದು ಹೇಳಿದರು.
ದರ್ಗಾ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಸಖಾಫಿ ಚಾಲನೆ ನೀಡಿದರು. ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್, ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷರುಗಳಾದ ಬಾವ ಮೊಹಮ್ಮದ್, ಯು.ಕೆ.ಇಸ್ಮಾಯಿಲ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಸದಸ್ಯ ಖಾಸಿಂ ಕೋಡಿ, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಯು.ಎಚ್.ಮೊಹಮ್ಮದ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ಕೆನರಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಕೋಶಾಧಿಕಾರಿ ಹಮೀದ್ ಕಲ್ಲಾಪು, ಸದಸ್ಯ ಅಯೂಬ್ ಯು.ಪಿ, ಅಕ್ಕರೆಕೆರೆ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಅಬೂಬಕ್ಕರ್, ಕುಂಞ ಅಹ್ಮದ್, ಅಬೂಬಕ್ಕರ್ ಹೈದರಾಲಿರಸ್ತೆ, ಹಮೀದ್ ಅಲೇಕಳ, ಹಮೀದ್ ಕೋಡಿ, ಚೆಯಿಮೋನು, ಆಲಿಮೋನು, ಇಬ್ರಾಹಿಂ ಉಳ್ಳಾಲಬೈಲ್, ಜಮಾಲ್ ಬಾರ್ಲಿ, ಅಬ್ಬಾಸ್ ಕೋಟೆಪುರ ಮೊದಲಾದವರು ಉಪಸ್ಥಿತರಿದ್ದರು.
ಸಂಚಾಲಕರ ನೇಮಕ:
ದರ್ಗಾ ಅಧೀನಕ್ಕೊಳಪಡುವ ಐದು ಮೊಹಲ್ಲಾಗಳಿಗೆ ಸಂಚಾಲಕರನ್ನು ನೇಮಿಸಲಾಯಿತು. ಕಲ್ಲಾಪುವಿಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೋಟೆಪುರಕ್ಕೆ ಸ್ವದಕತ್ತುಲ್ಲಾ, ಅಲೇಕಳಕ್ಕೆ ಇಬ್ರಾಹಿಂ, ಮುಕಚ್ಚೇರಿಗೆ ಖಾಲಿದ್ ಉಳ್ಳಾಲಬೈಲ್ ಹಾಗೂ ಮೇಲಂಗಡಿಗೆ ಕೌನ್ಸಿಲರ್ ಪೊಡಿಮೋನು ನೇಮಕಗೊಂಡರು.



