UN Networks
ಉಳ್ಳಾಲ: ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಾಗಿದ್ದು, ಆಟಿ ತಿಂಗಳ ಆಹಾರ ಪದ್ಧತಿ ಮತ್ತು ಆಚರಣೆಗಳನ್ನು ನೆನಪಿಸುವ ಕಾರ್ಯ ಶ್ಲಾಘನೀಯ ಎಂದು ಪ್ರಗತಿಪರ ಕೃಷಿಕ ಸೀತಾರಾಮ ಗಟ್ಟಿ ಕಣಂತೂರು ಅಭಿಪ್ರಾಯಪಟ್ಟರು.
ಅವರು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಿಳಾ ವಿಭಾಗದ ಆಶ್ರಯದಲ್ಲಿ ನಡೆದ `ಆಟಿದ ನೆಂಪು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಳೆಗಾಲದ ನಂತರದ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ಇತ್ತು. ಕೃಷಿಕರು ಈ ಅವಧಿಯಲ್ಲಿ ಮೂರು ಬೆಳೆಗಳನ್ನು ಮಾಡುತ್ತಿದ್ದರು. ಆದರೆ ಇಂದು ಕೃಷಿ ಸಂಸ್ಕೃತಿ, ಅಳಿವಿನಂಚಿನಲ್ಲಿದ್ದು ಒಂದು ಬೆಳೆ ಮಾಡುವುದೇ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಯುವ ಜನತೆ ಕೃಷಿ ಸಂಸ್ಕೃತಿಯತ್ತ ಹೆಚ್ಚಿನ ಗಮನ ನೀಡಬೇಕು ಎಂದರು.
ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಇದರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪವಿತ್ರ ಕುಮಾರ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗಟ್ಟಿ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಸೋಮೇಶ್ವರ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಸನ್ಮಾನ ಸ್ವೀಕರಿಸಿ ಮಾತನಾಡಿ ಗಟ್ಟಿ ಸಮಾಜದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಇಂದು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾದ್ಯವಾಗಿದ್ದು, ನೂತನ ಸಮಿತಿ ಹಿರಿಯರ ಮಾರ್ಗದರ್ಶನದೊಂದಿಗೆ ಎಲ್ಲರನ್ನು ಒಟ್ಟಿಗೆ ಸೆರಿಸಿಕೊಂಡು ಗಟ್ಟಿ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿ ಎಂದರು.
ಗಟ್ಟಿ ಸಮಾಜದ ಹಿರಿಯರಾದ ನಾರಾಯಣ ಗಟ್ಟಿ ಮೇಲ್ಡರು, ನಾಯ್ಗರ ಪ್ರತಿನಿಧಿ ಪದ್ಮನಾಭ ಗಟ್ಟಿ ಕಟ್ಟಪುಣಿ, ಸೋಮನಾಥ ಸೇವಾ ಸಂಘದ ಅಧ್ಯಕ್ಷ ಕೆ.ಆರ್.ಗಟ್ಟಿ ಕೊರಂತೋಡಿ, ಯುವಜನ ವಿಭಾಗದ ಅಧ್ಯಕ್ಷ ರಾಜೇಶ್ ಗಟ್ಟಿ ಕುಂಪಲ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಹರೀಶ್ ಗಟ್ಟಿ ತೊಕ್ಕೊಟ್ಟು, ಗಟ್ಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ದಯಾನಂದ ಗಟ್ಟಿ ಪಿಲಾರ್,ನಿಕಟಪೂರ್ವ ಕೋಶಾಧಿಕಾರಿ ಸತ್ಯಮೋಹನ್ ಗಟ್ಟಿ ಪಾಂಡೇಶ್ವರ, ಯುವಜನ ವಿಭಾಗದ ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಗಟ್ಟಿ ಬಜಿಲಕೇರಿ, ಮಹಿಳಾ ವಿಭಾಗದ ನಿರ್ಗಮನ ಅಧ್ಯಕ್ಷೆ ಹಿತಾಕ್ಷಿ ಹರೀಶ್ ಗಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಧನಸಹಾಯದ ಚೆಕ್ ವಿತರಿಸಲಾಯಿತು.
ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಿತಿನ್ ಗಟ್ಟಿ ಲೇಡಿಹಿಲ್ ಸ್ವಾಗತಿಸಿದರು. ಯುವಜನ ವಿಭಾಗದ ಕಲಾ ಕಾರ್ಯದರ್ಶಿ ರಾಜೇಶ್ ಗಟ್ಟಿ ಪಿಲಾರ್ ಕಾರ್ಯಕ್ರಮ ನಿರ್ವಹಿಸಿದರು.ಗಟ್ಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಕೃಷ್ಣ ಮೋಹನ್ ಗಟ್ಟಿ ಮಣ್ಣಗುಡ್ಡ ವಂದಿಸಿದರು.




