UN Networks
ಉಳ್ಳಾಲ: ಆಲೋಪತಿ ಔಷಧ ಪದ್ಧತಿಗೆ ಯುವಸಮುದಾಯ ಹೊಂದಿಕೊಂಡಿದೆ, ಮಕ್ಕಳು ಕೂಡಾ ಸಣ್ಣ ನ್ಯೂನತೆಗೂ ಆಲೋಪತಿ ಮಾತ್ರೆಗಳಿಗೆ ಅವಲಂಬಿತರಾಗುವಂತೆ ಹೆತ್ತವರು ಕಲಿಸಿಕೊಡುತ್ತಿದ್ದಾರೆ. ಆದರೆ ಆಲೋಪತಿ ಔಷಧಿ ಕೇಂದ್ರವನ್ನು ಹೊರತುಪಡಿಸಿ ಪ್ರಕೃತಿಯಲ್ಲೇ ಔಷಧವಿದೆ. ಇದರಿಂದ ರೋಗಗಳನ್ನು ದೂರವಾಗಿಸಬಹುದು ಅನ್ನುವ ಸಂದೇಶದೊಂದಿಗೆ ಮಂಗಳೂರಿನ ಬೆಂದೂರಿನ ಸಂತ ಆಗ್ನೇಸ್ ಸ್ವಾಯುತ್ತ ಕಾಲೇಜಿನ ಪದವಿ ವಿದ್ಯಾರ್ಥಿಗಳು ಉಳ್ಳಾಲ ವ್ಯಾಪ್ತಿಯ ಬಬ್ಬುಕಟ್ಟೆ, ಕುತ್ತಾರು, ಪಿಲಾರು, ಬಗಂಬಿಲ ಸರಕಾರಿ ಶಾಲೆಗಳಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಿಶಿಷ್ಟ ಅನುಭವವನ್ನು ನೀಡಿತು.
` ಸಮುದಾಯದತ್ತ ಆಗ್ನೇಸ್’ ಕಾರ್ಯಕ್ರಮದಡಿ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ವಾರಗಳಿಂದ ಪ್ರತಿ ಶನಿವಾರ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಗಿಡ ನೆಡುವ ಮತ್ತು ಇಂಗು ಗುಂಡಿಗಳ ನಿರ್ಮಾಣ, ಗದ್ದೆಗಳಲ್ಲಿ ಕೃಷಿ ಕೆಲಸದಲ್ಲಿ ಭಾಗವಹಿಸುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದ ವಿದ್ಯಾರ್ಥಿಗಳು, ಈ ಬಾರಿ ಶಾಲೆಗಳಲ್ಲಿ ಹಮ್ಮಿಕೊಂಡ ಔಷಧೀಯ ಗಿಡ ನೆಡುವ ಮತ್ತು ಗಿಡದ ಮಾಹಿತಿ ನೀಡುವ ಕಾರ್ಯಕ್ರಮ ಗ್ರಾಮಸ್ಥರಿಗೆ ಉಪಯುಕ್ತ ಮಾಹಿತಿಯನ್ನು ನೀಡಿತು.
ನಗರಪ್ರದೇಶದ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ನಗರದ ಸಂಸ್ಕೃತಿಗೆ ಹೊಂದಿಕೊಂಡಿರುತ್ತಾರೆ. ನಾಟಿ ಔಷಧ, ಹಳ್ಳಿ ಸಂಸ್ಕೃತಿಯ ಬಗ್ಗೆ ಅರಿವು ಕಡಿಮೆಯಿರುತ್ತದೆ . ಆದರೆ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಯರು ಅದನ್ನು ಸವಾಲಾಗಿ ಎದುರಿಸಿ ಔಷಧೀಯ ಗಿಡಗಳ ಮಾಹಿತಿಯನ್ನು ಕರಾರುವಕ್ಕಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ನೀಡಿದರು.
ತುಳಸಿ ಗಿಡ ಬಹುತೇಕ ಗಿಡಗಳಿಗೆ ರಾಮಬಾಣ, ತಿಮರೆ ಗಿಡ ಸ್ಮರಣೆ ಶಕ್ತಿ ವೃದ್ಧಿಗೆ, ಅಮೃತ ಬಳ್ಳಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ , ಜ್ವರಬಾಧೆಗೆ ಮಜ್ಜಿಗೆ ಹುಲ್ಲು , ಚರ್ಮರೋಗಕ್ಕೆ ದಾಸವಾಳ ಹೂವು ಉಪಯುಕ್ತ ಹೀಗೆ ವಿವಿಧ ರೀತಿಯ ಗಿಡಗಳ ಔಷಧೀಯ ಗುಣಗಳ ಮಾಹಿತಿಯನ್ನು ವಿದ್ಯಾರ್ಥಿನಿಯರು ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದರು. ಶನಿವಾರ ಬೆಳಗ್ಗಿನಿಂದ ಮಳೆ ಬಂದರೂ ಲೆಕ್ಕಿಸದೆ ಮಣ್ಣನ್ನು ಅಗೆದು ಶಾಲಾ ಆವರಣದಲ್ಲಿ ತಾವೇ ಸಂಗ್ರಹಿಸಿದ ಗಿಡಗಳನ್ನು ವಿದ್ಯಾರ್ಥಿನಿಯರು ನೆಟ್ಟರು. ಬಳಿಕ ನೆಟ್ಟ ಗಿಡಗಳ ಪೋಷಣೆಯ ಮಾಹಿತಿಯ ಜತೆಗೆ ಗಿಡಗಳ ಉಪಯೋಗವನ್ನು ತಿಳಿಯಪಡಿಸಿದರು.
ಪ್ರಾಂಶುಪಾಲೆ ಡಾ.ಜೆಸ್ವೀನಾ ಎ.ಸಿ ನಿರ್ದೇಶನದಂತೆ ನಡೆದ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಡಾ. ವೆನಿಸ್ಸಾ ಎ.ಸಿ, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಅನಿಲ್ ಬಗಂಬಿಲ, ಸೋಮೇಶ್ವರ ಗ್ರಾ.ಪಂ ಸದಸ್ಯ ದೇವಾನಂದ ಶೆಟ್ಟಿ ಕುಂಪಲ, ಬಗಂಬಿಲ ಶಾಲೆ ಮುಖ್ಯಶಿಕ್ಷಕಿ ಶಕುಂತಳ, ಅಂಗನವಾಡಿ ಶಿಕ್ಷಕಿ ಪುಷ್ಪಾ, ಸಂತ ಆಗ್ನೇಸ್ ಕಾಲೇಜು ಉಪನ್ಯಾಸಕರುಗಳಾದ ಪ್ರೊ.ವಿದ್ಯಾ ಸರಸ್ವತಿ, ಮೋಕ್ಷಿತಾ, ಎಲ್ವೀರಾ, ಮ್ಯೂರೆಟ್, ಡಾ.ಎಡಿಲೈಡ್ ಸಲ್ದಾನ್ಹ ವಿದ್ಯಾರ್ಥಿಗಳ ಜತೆಗೆ ಕೈಜೋಡಿಸಿದರು.
ಕಳೆದ ಮೂರು ವಾರಗಳಿಂದ ಸಂತ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಯರು ಮುನ್ನೂರು, ಹರೇಕಳ, ಸೋಮೇಶ್ವರ ಗ್ರಾಮಗಳಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಸರಕಾರಿ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವಾರ 150 ಮಕ್ಕಳ ತಂಡ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಔಷಧಿ ಸಸ್ಯಗಳ ಪರಿಚಯ ಹಾಗೂ ಮಾಹಿತಿಯನ್ನು ಮಕ್ಕಳಿಗೆ ತಿಳಿಸುವ ಕಾರ್ಯ ವಿನೂತನವಾಗಿದೆ. ಈ ಮೂಲಕ ಎಳೆಯ ಹರೆಯದಲ್ಲೇ ಮಕ್ಕಳಲ್ಲಿ ಪಾರಂಪರ್ಯ ಔಷಧಿ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಿದೆ.
ಧನಲಕ್ಷ್ಮೀ ಗಟ್ಟಿ
ಜಿಲ್ಲಾ ಪಂಚಾಯಿತಿ ಸದಸ್ಯರು
ಸೇವಾ ಚಟುವಟಿಕೆಗಳು ಕೆಲ ವರ್ಷಗಳಿಂದ ನಡೆಯುತ್ತಾ ಬಂದಿದೆ. ಮೂರು ಗ್ರಾಮಗಳನ್ನು ದತ್ತು ಪಡೆದು ವಿವಿಧ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಗ್ರಾಮೀಣ ಮಟ್ಟದ ಜನರಿಗೆ ಅನುಕೂಲವಾಗುವ ಉದ್ದೇಶವನ್ನು ಮುಂದಿಟ್ಟುಕೊಂಡು ಕಾಲೇಜು ಕಾರ್ಯ ಚಟುವಟಿಕೆ ನಡೆಸಲಾಗುತ್ತಿದೆ. ಮಕ್ಕಳಿಂದ ಮತ್ತು ಉಪನ್ಯಾಸಕರು ಸಂಗ್ರಹಿಸಿದ ಗಿಡಗಳನ್ನು ನೆಡಲಾಗುತ್ತಿದೆ
ಮೋಕ್ಷಿತಾ
ಉಪನ್ಯಾಸಕಿ ಸಂತ ಆಗ್ನೇಸ್ ಕಾಲೇಜು
























