ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಅಂಬಿಕಾರೋಡ್: ಪೊಲೀಸ್ ಬೀಟ್ ವ್ಯವಸ್ಥೆಯಡಿ ಅವರಿಗೆ ಮಾಹಿತಿದಾರರನ್ನಾಗಿ ನೇಮಿಸುವ ಕಮಿಟಿಯಲ್ಲಿ ಯಾವುದೇ ಅಪರಾಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಕೈಬಿಡಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಹೇಳಿದ್ದಾರೆ.
ಅವರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆ – ಜನಸ್ನೇಹಿ ಪೊಲೀಸ್ ಹಾಗೂ ಪ್ರದೇಶಕ್ಕೊಬ್ಬ ಪೊಲೀಸ್ ಕುರಿತು ಸೋಮವಾರ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಳ್ಳಾಲ ಠಾಣಾ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ 55 ಬೀಟ್ ಗಳನ್ನು ರಚಿಸಲಾಗಿದೆ. ಆಯಾಯ ಬೀಟ್ ಗಳ ಜವಾಬ್ದಾರಿ ಸಿಬ್ಬಂದಿಗೆ ನೀಡಲಾಗಿದೆ. ಅವರಡಿ ಬರುವ ಪ್ರದೇಶದ ಜನರ ಕಮಿಟಿಗಳಲ್ಲಿ ಯಾವುದೇ ಅಪರಾಧ ಹಿನ್ನೆಲೆ ಉಳ್ಳವರನ್ನು ಸೇರಿಸಲಾಗುವುದಿಲ್ಲ. ಇದರಿಂದ ಜನರು ಮುಕ್ತವಾಗಿ ಆಯಾಯ ಬೀಟ್ ಗಳಲ್ಲಿ ಕಾರ್ಯಾಚರಿಸುವ ಸಿಬ್ಬಂದಿಯಲ್ಲಿ ಮಾಹಿತಿ ನೀಡಬಹುದು. ಈ ಮೂಲಕ ಇಲಾಖೆ ಸೂಕ್ತ ಕ್ರಮಕೈಗೊಳ್ಳಬಹುದು ಎಂದರು.
ನಗರಸಭೆ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ಅವರು ಬೀಟ್ ವ್ಯವಸ್ಥೆಯಡಿಯಲ್ಲಿ ಅಪರಾಧಿಗಳನ್ನು ಕಮಿಟಿಯಲ್ಲಿ ಸೇರ್ಪಡೆ ಮಾಡಿದಲ್ಲಿ ಮಾಹಿತಿಗಳು ಸೋರಿಕೆಯಾಗುವ ಭೀತಿಯಿರುತ್ತದೆ. ಕೆಲ ಮಂದಿ ರಾಜಕೀಯ ಮುಖಂಡರ ಜತೆಗೆ ಆಪ್ತರಾಗಿದ್ದುಕೊಂಡು , ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಅವರನ್ನು ಸೇರ್ಪಡೆ ಮಾಡಿದಲ್ಲಿ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಅಸಾಧ್ಯ ಎಂಬ ಅಭಿಪ್ರಾಯಕ್ಕೆ ಸಹಾಯಕ ಪೊಲೀಸ್ ಆಯುಕ್ತರು ಉತ್ತರಿಸಿದರು.
ಉಚ್ಚಿಲ ಎಂಡ್ ಪಾಯಿಂಟ್ ನಲ್ಲಿ ಅಕ್ರಮ ಚಟುವಟಿಕೆಗಳು ಬಹಳಷ್ಟು ನಡೆಯುತ್ತಿದೆ. ವಾರದ ಕೊನೆಯ ಎರಡು ದಿನಗಳಲ್ಲಿ ತಡರಾತ್ರಿ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಕೆಡವಿರುವ ರೆಸಾರ್ಟ್ ಒಂದರಲ್ಲಿಯೂ ದಿನಾ ಅಪರಿಚಿತರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಇದರಿಂದ ಸ್ಥಳೀಯರಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ. ಪೊಲೀಸರು ಕನಿಷ್ಟ ಒಂದು ಬಾರಿಯಾದರೂ ಅಲ್ಲಿಗೆ ಗಸ್ತು ತಿರುಗಿದಲ್ಲಿ ಅಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು. ಎಂದು ಉಚ್ಚಿಲದ ಪ್ರಕಾಶ್ ಎಂಬವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೀಟ್ ವ್ಯವಸ್ಥೆಯಡಿ ಬರುವ ಸಮಿತಿಯ ಸದಸ್ಯರನ್ನು ತಿಂಗಳಿಗೆ ಒಮ್ಮೆ ಸಭೆ ಸೇರಿಸಿ ಚರ್ಚಿಸಬೇಕಿದೆ. ಆಯಾಯ ಬೀಟ್ ನಲ್ಲಿರುವ ಸಿಬ್ಬಂದಿಯಲ್ಲಿ ಅವರ ಪ್ರದೇಶದಲ್ಲಿರುವ ಪ್ರತಿಯೊಂದು ಅಂಗಡಿ, ಮನೆ ಹಾಗೂ ಹೊರಜಿಲ್ಲೆಯವರಿಂದ ಬರುವವರ ಮಾಹಿತಿಯನ್ನು ನೀಡುವುದರಿಂದ ಪೊಲೀಸರಿಗೆ ಎಲ್ಲಾ ರೀತಿಯಲ್ಲೂ ಸಹಕಾರವಾಗುವುದು ಎಂದು ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಹಾಸ್ ಉಳ್ಳಾಲ್ ಹೇಳಿದರು.
ಈ ಸಂದರ್ಭ ಠಾಣಾಧಿಕಾರಿ ಕೆ.ಆರ್ ಗೋಪಿಕೃಷ್ಣ , ಉಪನಿರೀಕ್ಷಕರಾದ ಪ್ರಕಾಶ್ ಕುಮಾರ್ ಹಾಗೂ ಮೋಹನದಾಸ್ , ಪ್ರೊಬೆಷನರಿ ಉಪನಿರೀಕ್ಷಕ ವಿನಾಯಕ್ ಉಪಸ್ಥಿತರಿದ್ದರು.
ಉಪನಿರೀಕ್ಷಕ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಠಾಣಾ ಸಿಬ್ಬಂದಿ ಸತೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಎಎಸ್‍ಐ ರಾಧಾಕೃಷ್ಣ ವಂದಿಸಿದರು.











