ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ಬುಧವಾರ ತಡರಾತ್ರಿ ವೇಳೆ ನೇತ್ರಾವತಿ ಸೇತುವೆಯ ತಡೆಗೆ ಢಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ತಡೆಯಲ್ಲಿ ನೀರಿನ ಪೈಪ್ ಇದ್ದುದರಿಂದ ನದಿಗೆ ಉರಳುವ ಸಂಭಾವ್ಯವಿದ್ದ ಲಾರಿ ದೊಡ್ಡದೊಂದು ಅನಾಹುತದಿಂದ ತಪ್ಪಿದಂತಾಗಿದೆ.
ಕಣ್ಣೂರು ನಿವಾಸಿ ಸಂಶುದ್ದೀನ್ ಎಂಬವರಿಗೆ ಸೇರಿದ ಲಾರಿ ಇದಾಗಿದ್ದು, ಉಮೇಶ್ ಎಂಬಾತ ಲಾರಿ ಚಾಲಕನಾಗಿದ್ದಾನೆ. ಕಲ್ಲಾಪು ಭಾಗದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಳೇಯ ನೇತ್ರಾವತಿ ಸೇತುವೆಯ ಎಡಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ತಡೆ ಸಂಪೂರ್ಣ ಮುರಿದುಬಿದ್ದಿದ್ದು, ಢಿಕ್ಕಿ ಹೊಡೆದ ಲಾರಿ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ತಪ್ಪಿದೆ. ಕುಡಿಯುವ ನೀರಿನ ಪೈಪ್ ಲೈನ್ ಸೇತುವೆಯ ತಡೆಯಲ್ಲಿದ್ದುದರಿಂದಾಗಿ ತಡೆ ಮುರಿದರೂ ಕೆಳಗೆ ಬೀಳದೆ ಲಾರಿಯೂ ನದಿ ನೀರಿಗೆ ಉರುಳುವುದರಿಂದ ತಪ್ಪಿದಂತಾಗಿದೆ.
ತಡರಾತ್ರಿ ಅಪಘಾತ ನಡೆದಿರುವ ಮಾಹಿತಿ ಠಾಣೆಗೆ ಬಂದಿದೆ. ಕೂಡಲೇ ಹೈವೇ ಮೊಬೈಲ್ ಪ್ಯಾಟ್ರಲಿಂಗ್ನಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಲಾರಿಯನ್ನು ಅಪಘಾತ ನಡೆದ ಸ್ಥಳದಿಂದ ಮೇಲಕ್ಕೆತ್ತಲಾಗಿದೆ. ಚಾಲಕ ಉಮೇಶ್ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿ ಅಕ್ರಮವಾಗಿ ತನ್ನ ಗಮನಕ್ಕೆ ಬಾರದಂತೆ ಚಾಲಕ ಮರಳು ಸಾಗಾಟ ನಡೆಸಿರುವ ಬಗ್ಗೆ ಲಾರಿ ಮಾಲೀಕ ಸಂಶುದ್ಧೀನ್ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ.
ದಿನವಿಡೀ ಸಂಚಾರ ಅಸ್ತವ್ಯಸ್ತ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೇತ್ರಾವತಿ ಸೇತುವೆ ತಡೆಗೆ ಹಾನಿಯಾಗಿದ್ದು, ಮರಳು ರಸ್ತೆಯಲ್ಲಿ ಬಿದ್ದಿದ್ದರಿಂದಾಗಿ ವಾಹನ ಸವಾರರು ಲಾರಿ ನದಿಗೆ ಉರುಳಿದೆ ಎಂದು ಭಾವಿಸಿ ನದಿ ನೀರನ್ನು ಇಣುಕಲು ಆರಂಭಿಸಿದ್ದರು. ಬೆಳಗ್ಗಿನಿಂದಲೂ ದ್ವಿಚಕ್ರ, ಚತುಶ್ಚಕ್ರ ವಾಹನಗಳನ್ನು ಸೇತುವೆಯಲ್ಲೇ ನಿಲ್ಲಿಸಿ ಕುತೂಹಲಿಗರು ಜಮಾಯಿಸಿ ನದಿಗೆ ಇಣುಕುತ್ತಲೇ ಇದ್ದರು. ಲಾರಿಯೊಂದು ನದಿಗೆ ಬಿದ್ದಿರುವುದಾಗಿ ಹಲವರು ಮಾಹಿತಿಯಿಲ್ಲದೆ ಸುಳ್ಳು ಹೇಳಿದ್ದರಿಂದಾಗಿ ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೂ ವಾಹನ ಸವಾರರ ಜಮಾವಣೆಯಿಂದಾಗಿ ಬೆಳಗ್ಗಿನಿಂದ ಸಂಜೆಯವರೆಗೂ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಕಂಕನಾಡಿ ಪೊಲೀಸರು ಸ್ಥಳದಲ್ಲಿ ನಿಂತು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


