ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು: ವೃತ್ತಿಯಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಪುರುಷೋತ್ತಮ ಉಳ್ಳಾಲ್(60) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಮಂಗಳೂರು ವಿಶ್ವವಿದ್ಯಾಲಯವನ್ನು ಸಂಪರ್ಕಿಸುವ ಕೊಣಾಜೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಮಂಜನಾಡಿ ಬಸ್‍ನಲ್ಲಿ ಕಂಡೆಕ್ಟರ್ ಆಗಿದ್ದ ಪುರುಷೋತ್ತಮ ಉಳ್ಳಾಲ್ ವಿದ್ಯಾರ್ಥಿಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಇಂದಿಗೂ ಪುರುಷಣ್ಣ ಎಂದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಆ ರೂಟಿನ ಮೆಚ್ಚಿನ ಕಂಡೆಕ್ಟರ್ ಆಗಿದ್ದರು. ಪದವಿ, ಸ್ನಾತಕೋತ್ತರ ಪದವಿ ಪಡೆದು ಉದ್ಯೋಗಕ್ಕೆ ಸೇರಿದರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಯಂತೆಯೇ ಬೆರೆತುಹೋಗಿದ್ದ ಪುರುಷಣ್ಣನ ಜೊತೆಗೆ ತಮ್ಮ ನೆನಪುಗಳನ್ನು ಕಳೆಯಲು ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. 80-90ರ ದಶಕದಲ್ಲಿ ಬಸ್‍ಗಳಲ್ಲಿ ಪುಂಡಾಟಿಕೆ ವಿಪರೀತ ಇದ್ದ ದಿನಗಳಲ್ಲೂ ಪುರುಷಣ್ಣ ಇದ್ದ ಬಸ್‍ನಲ್ಲಿ ವಿದ್ಯಾರ್ಥಿಗಳು ಗೌರವ ಕೊಡುತ್ತಿದ್ದರು.
ಹವ್ಯಾಸಿ ಕಲಾವಿದರಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿ ತುಳು ನಾಟಕ ರಂಗಭೂಮಿಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಉತ್ತಮ ದೇಹರ್ದಾಢ್ರ್ಯತೆಯನ್ನು ಹೊಂದಿದ್ದ ಉಳ್ಲಾಲ್ ಅವರಿಗೆ ಖಳನಾಯಕನ ಪಾತ್ರ ಹೆಚ್ಚು ಪ್ರಸಿದ್ಧಿ ಕೊಟ್ಟಿತ್ತು. ಕನ್ನಡದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಚಲನಚಿತ್ರದಲ್ಲಿ ವಜ್ರಮುನಿ ಮಾಡಿದ ಮೂಕಾಸುರ ಪಾತ್ರದಂತೆಯೇ ತುಳು ರಂಗಭೂಮಿಯಲ್ಲಿ ಸಾಕಷ್ಟು ಪ್ರದರ್ಶನ ಕಂಡ `ಅಪ್ಪೆ ಮೂಕಾಂಬಿಕೆ’ ನಾಟಕದಲ್ಲಿ ಉಳ್ಳಾಲ್ ಅವರ ಮೂಕಾಸುರ ಪಾತ್ರ ಬಹಳಷ್ಟು ಹೆಸರು ಕೊಟ್ಟಿತ್ತು. ಪೆÇಲೀಸ್ ಇನ್ಸ್‍ಪೆಕ್ಟರ್‍ನಾಯಕ, ಖಳನಾಯಕವೂ ಅವರಿಗೆ ಹೇಳಿಸಿದಂತಿತ್ತು. ಮಾಮುಗಾಂವದಿ ಮಾಮು, ಮರಾಠಿ ನಾಟಕ ಆಧಾರಿತ ಅಸಲ್ ಏರ್ ತುಳು ನಾಟಕದಲ್ಲಿ ರಾಜೇಶ್ ಬಂಟ್ವಾಳ ರ ಪಾತ್ರದಷ್ಟೇ ಮಹತ್ವ ಉಳ್ಳಾಲ್ ಅವರ ಪಾತ್ರ ಪಡೆದಿತ್ತು. ಕೊಡಿಯಾಲ್‍ಬೈಲ್ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದ ಅವರು `ಒರಿಯರ್ದೊರಿ ಅಸಲ್’ ಹಾಗೂ `ಕಡಲ ಮಗೆ’ ಚಲನಚಿತ್ರದಲ್ಲೂ ನಟಿಸಿದ್ದರು.
ಉಳ್ಳಾಲದ ಬಂಡಿಕೊಟ್ಯ ಶ್ರೀ ಮಲರಾಯ ದೇವಸ್ಥಾನದ ಸಮಿತಿ ಸದಸ್ಯರಾಗಿ, ಬಂಡಿಕೊಟ್ಯ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.


