ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು : ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ದಿನದಿಂದ ಜಸಸಾಮಾನ್ಯರಿಂದ ಹಿಡಿದು ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನು ಎರಡು ವರ್ಷದಲ್ಲಿ ನರೇಂದ್ರ ಮೋದಿ ಸರಕಾರದ ಬದಲು ರಾಹುಲ್ ಗಾಂಧಿ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು.
ಮಂಗಳೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್‍ನ ಆಶ್ರಯದಲ್ಲಿ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲು ಒತ್ತಾಯಿಸಿ ತೊಕ್ಕೊಟ್ಟು ಎಸ್‍ಬಿಐ ಬ್ಯಾಂಕ್‍ನ ಎದುರು ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯನವರು ಪ್ರತೀ ಜಿಲ್ಲೆಯಲ್ಲಿರುವ ರೈತರ ಬಗ್ಗೆ ಅಧ್ಯಯನ ನಡೆಸಿ ಇದೀಗ ಸಾಲ ಮನ್ನಾ ಮಾಡುವ ಮೂಲಕ ಬಿಜೆಪಿ ಸರಕಾರಕ್ಕೆ ತಕ್ಕ ಉತ್ತರ ನೀಡಿದ್ದು, ರೈತರ ಪರವಾಗಿ ಮೊಸಳೆ ಕಣ್ಣೀರು ಹಾಕುತ್ತಿದ್ದ ಬಿಜೆಪಿಗರು ಈಗ ತಲೆಮರೆಸಿಕೊಂಡಿದ್ದಾರೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರ ರೈತ ವಿರೋಧ ಸರಕಾರವಾಗಿದ್ದು ಇದರ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದ ಅವರು ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿಗರು ಮೊಸಳೆ ಕಣ್ಣೀರು ಸುರಿಸುತ್ತಿದ್ದು ಇವರ ಈ ಕಣ್ಣೀರಿಗೆ ಕರ್ನಾಟಕದ ಜನತೆ ಮರುಳಾಗಬಾರದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಆಡಳಿತಕ್ಕೆ ಬರಲಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ಎಸ್.ಕರೀಂ, ತಾ.ಪಂ ಸದಸ್ಯರಾದ ಸಿದ್ಧೀಕ್ ಕೊಳಂಗೆರೆ, ಜಬ್ಬಾರ್ ಬೋಳಿಯಾರ್, ಉಳ್ಳಾಲ ನಗರ ಸಭಾಧ್ಯಕ್ಷ ಹುಸೇನ್ ಕುಂಞಮೋನು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಕಲ್ಲಾಪು, ಸದಸ್ಯರಾದ ಬಾಝಿಲ್ ಡಿಸೋಜಾ, ಭಾರತಿ, ಜೇನ್ ಶಾಂತಿ ಡಿಸೋಜಾ, ಮಂಗಳೂರು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಮ್, ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಹಿಳಾ ಮೋರ್ಚಾ ಅಧ್ಯಕ್ಷೆ , ದೇವಕಿ ಉಳ್ಳಾಲ್, ತಾ. ಪಂ. ಮಾಜಿ ಸದಸ್ಯ ಉಮ್ಮರ್ ಫಜೀರು ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ಮೊಯ್ದಿನ್ ಬಾವಾ, ಪುಷ್ಠಿ ಮಹಮ್ಮದ್, ಮುಖಂಡರಾದ ರಾಜೇಂದ್ರ ಬಂಡಸಾಲೆ, ಇಲಿಯಾಸ್, ರಿಚಾರ್ಡ್, ವಿನ್ಸೆಂಟ್, ನಾಸಿರ್ ಸಾಮಾನಿಗೆ, ಕಾರ್ತಿಕ್ ಪೂಜಾರಿ, ಸೇವಾದಳದ ಹೇಮಾ, ಪ್ರತಿಭಾ ಕಾಪಿಕಾಡ್, ವೈಭವ್ ಶೆಟ್ಟಿ , ವಿನೋದ್ ಶೆಟ್ಟಿ ತಲಪಾಡಿ, ಕಿಶೋರ್ ತೊಕ್ಕೊಟ್ಟು, ಪ್ರೇಮ್ ಬಿ. ದಾಸ್, ಕಿರಣ್ ಕಾಪಿಕಾಡ್, ಸಮೀರ್ ಪಜೀರು, ಪವನ್ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.











