ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೋಟೆಕಾರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‍ನ ಕೆ.ಸಿರೋಡಿನಲ್ಲಿರುವ ತಲಪಾಡಿ ಶಾಖೆಯಿಂದ 30ಕೆ.ಜಿ ಚಿನ್ನಾಭರಣವನ್ನು ಡರೋಡೆಗೈಯಲು ವಿಫಲ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅದೇ ಬ್ಯಾಂಕಿಗೆ ಸೇರಿದ ನಿರ್ದೇಶಕಿಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ತಡರಾತ್ರಿ ಪಿಲಾರು ಬಳಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಲಾರು ನಿವಾಸಿಗಳಾದ ಬೋಟ್ ರಾಮ ಯಾನೆ ರಾಮಚಂದ್ರ ಪೂಜಾರಿ (50) ಹಾಗೂ ನೆರೆಮನೆಯ ಮೋಹನ್ ಶೆಟ್ಟಿಗಾರ್(35) ಸಿಸಿಬಿ ಪೊಲೀಸರ ವಶದಲ್ಲಿರುವ ಆರೋಪಿಗಳು. ರಾಮ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕಿಯೋರ್ವರ ಪತಿಯಾಗಿದ್ದಾರೆ.
ಜೂ. 23ರಂದು ಕೆ.ಸಿರೋಡಿನಲ್ಲಿರುವ ತಲಪಾಡಿ ಶಾಖೆಯಲ್ಲಿ ಡರೋಡೆಗೆ ವಿಫಲ ಯತ್ನ ನಡೆದಿತ್ತು.
ಪಲ್ಸಾರ್ ಬೈಕಿನಲ್ಲಿ ಬಂದಿದ್ದ ಆಗಂತುಕರಿಬ್ಬರು ಬ್ಯಾಂಕಿನ ವಾಚ್‍ಮೆನ್‍ಗೆ ಹಲ್ಲೆ ನಡೆಸಿ ಬೆದರಿಸಿ ಒಳಕರೆದೊಯ್ದು ಶಟರನ್ನು ಹಾಕಿದ್ದರು. ಬಳಿಕ ಬ್ಯಾಂಕಿನಲ್ಲಿದ್ದ ಮೂವರು ಸಿಬ್ಬಂದಿಗೆ ಚೂರಿ ತೋರಿಸಿ ಅವರು ಶೌಚಾಲಯದೊಳಗೆ ಕೂಡಿ ಹಾಕಿದ್ದರು. ನಂತರ ಬ್ಯಾಂಕಿನೊಳಗೆ ಇದ್ದ ಲಾಕರಿನಿಂದ ಸುಮಾರು 30 ಕೆ.ಜಿ ಯಷ್ಟು ಚಿನ್ನವನ್ನು ತಂದಿದ್ದ ಗೋಣಿಚೀಲದೊಳಗೆ ಹಾಕಿ ಮತ್ತೆ ಶಟರನ್ನು ಹಾಕಿ ಪರಾರಿಯಾಗಿದ್ದರು. ಶೌಚಾಲಯದೊಳಗಿದ್ದ ಸಿಬ್ಬಂದಿ ಚಿನ್ನದ ಪರೀಕ್ಷಕ ರಾಮಚಂದ್ರ ಎಂಬವರು ಬಾಗಿಲು ಮುರಿದು ಶಟರ್ ತೆರೆದು ಕೆಳಗೆ ಓಡಿ ಬರುವಾಗ, ಇಬ್ಬರು ಬೈಕಿನಲ್ಲಿ ಪರಾರಿಯಾಗಲು ಅನುವಾಗುತ್ತಿದ್ದರು. ಆದರೆ ಧೈರ್ಯ ಮೆರೆದ ಸಿಬ್ಬಂದಿ ರಾಮಚಂದ್ರ ಬೈಕಿನಲ್ಲಿದ್ದ ಓರ್ವನ ಮೇಲೆ ಕಲ್ಲು ಬಿಸಾಡಿದ್ದು, ಇದರಿಂದ ಬೈಕ್‍ನಿಂದ ಹತೋಟಿ ತಪ್ಪುತ್ತಿದ್ದಂತೆ, ಹಿಂಬದಿ ಸವಾರನ ಕೈಯಲ್ಲಿದ್ದ 30 ಕೆ.ಜಿಯಷ್ಟು ಚಿನ್ನವಿದ್ದ ಗೋಣಿಚೀಲ ಕೆಳಗೆ ಉರುಳಿದೆ. ಸ್ಥಳದಿಂದ ಇಬ್ಬರು ದರೋಡೆಕೋರರು ಪರಾರಿಯಾಗಿದ್ದರು. ಬ್ಯಾಂಕಿನ ಸಿಸಿಟಿವಿ ನಾದುರಸ್ತಿಯಲ್ಲಿದ್ದುದರಿಂದ ಕಳ್ಳರಿಬ್ಬರ ಪತ್ತೆ ಕಷ್ಟಕರವಾಗಿತ್ತು. ಬ್ಯಾಂಕಿನಲ್ಲಿ ಸೈರನ್ ಇಲ್ಲದೇ ಇರುವುದರಿಂದ ದರೋಡೆಕೋರರ ಕೃತ್ಯಕ್ಕೆ ಅಡ್ಡಿಯಾಗಿರಲಿಲ್ಲ.ಪ್ರಕರಣ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಮೊಬೈಲ್ ಟವರ್ ಲೊಕೇಷನ್ನಿನ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಸಂಗ್ರಹಿಸಿದ ಮಾಹಿತಿಯಲ್ಲಿ ಪಿಲಾರು ನಿವಾಸಿ ರಾಮಚಂದ್ರ ಮತ್ತು ಮೋಹನ್ ಮೊಬೈಲ್ ನಂಬರಿನ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಂತೆ ಪೊಲೀಸರು ಇಬ್ಬರನ್ನು ಸೋಮವಾರ ತಡರಾತ್ರಿ ಪಿಲಾರು ಮನೆಯಿಂದ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ತಿಂಗಳ ಹಿಂದೆ ರಾಮಚಂದ್ರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಚೀಟಿ ವ್ಯವಹಾರದಲ್ಲಿ ಹಣ ವಂಚಿಸಿದ ಕುರಿತ ದೂರುಗಳು ದಾಖಲಾಗಿತ್ತು. ಅಲ್ಲದೆ ಸೋಮೇಶ್ವರ ಪಂಚಾಯಿತಿ ಸದಸ್ಯೆ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿಯೂ ರಾಮಚಂದ್ರ ಅವರ ಮೇಲೆ ದೂರು ದಾಖಲಾಗಿತ್ತು. ಚೀಟಿ ವ್ಯವಹಾರ ನಡೆಸಿ ಜನರಿಂದ ಸಂಗ್ರಹಿಸಿದ ಹಣವನ್ನು ಹೆಚ್ಚುವರಿ ಬಡ್ಡಿಗೆಂದು ಸೋಮೇಶ್ವರ ಪಂಚಾಯಿತಿ ಮಹಿಳಾ ಸದಸ್ಯೆ ಮೂಲಕ ಗ್ರಾಹಕರಿಗೆ ನೀಡಿದ್ದರು. ಆದರೆ ಅದು ಹಣ ವಾಪಸ್ಸು ಸಿಗದ ಹಿನ್ನೆಲೆಯಲ್ಲಿ ರೂ. 70 ಲಕ್ಷದಷ್ಟು ನಷ್ಟ ಅನುಭವಿಸಿದ್ದ ರಾಮಚಂದ್ರ, ಪಂ.ಸದಸ್ಯೆ ಮಹಿಳೆಯಲ್ಲಿ ವಾಪಸ್ಸು ಹಣ ನೀಡುವಂತೆ ಕೇಳುತ್ತಲೇ ಇದ್ದರು. ಇದರಿಂದ ಮಾನಸಿಕವಾಗಿ ನೊಂದ ಪಂ.ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೇ ನಷ್ಟವನ್ನು ಭರಿಸುವ ಸಲುವಾಗಿ ನೆರೆಮನೆಯ ಮೋಹನ್ ಎಂಬಾತನಿಗೆ ಇಂತಿಷ್ಟು ಹಣ ನೀಡುವುದಾಗಿ ತಿಳಿಸಿ, ಬ್ಯಾಂಕಿನ ದರೋಡೆಗೆ ಯತ್ನಿಸಿದ್ದರು. ವಶದಲ್ಲಿರುವ ಇಬ್ಬರನ್ನು ಉಳ್ಳಾಲ ಪೊಲೀಸರು ಹೆಚ್ಚು ವಿಚಾರಣೆಗೆಂದು ಕಸ್ಟಡಿಗೆ ಪಡೆದುಕೊಂಡಿದ್ದಾರೆ.




