ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಯ ಹೆಸರಿನ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ರಾಜ್ಯ ಸರಕಾರ ಹಾಗೂ ಅದನ್ನು ಬೆಂಬಲಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೊ ಹೇಳಿದ್ದಾರೆ.
ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರ ರಾಂ ಶೆಟ್ಟಿ ಹೆಸರನ್ನು ಇಡುವುದರ ವಿರುದ್ಧ ಸಂತ ಅಲೋಷಿಯಸ್ ಸಂಸ್ಥೆ ಹಾಗೂ ವಿಜಯ ಬ್ಯಾಂಕ್ ನೌಕರರ ಸಂಘ ದಿಂದ ವಿರೋಧ ವ್ಯಕ್ತವಾಗಿದೆ. 2013 ರಲ್ಲಿ ಮಂಗಳೂರು ನಗರಪಾಲಿಕೆ ಹೆಸರು ಬದಲಾವಣೆ ಕುರಿತು ನಿರ್ಣಯ ಮಂಡಣೆ ಸಂದರ್ಭ ಅಲ್ಲಿನ ಕಾರ್ಪೊರೇಟರ್ ಆಗಲಿ, ದಕ್ಷಿಣ ಶಾಸಕರು ಹಾಗೂ ಮುಖ್ಯಸಚೇತಕರೂ ಸುದ್ದಿಯಲ್ಲಿರಲಿಲ್ಲ, ಆ ವೇಳೆ ಎಲ್ಲರೂ ದನ ಮೇಯಿಸುತ್ತಿದ್ದರೆಂದು ಕಾಣುತ್ತಿದೆ.
ಇದೀಗ ತಡೆಯಾಜ್ಞೆ ತರುವ ಮೂಲಕ ಎರಡು ಪಂಗಡಗಳ ಮಧ್ಯೆ ವೈಮನಸ್ಸು ತರುವ ಪ್ರಯತ್ನ ಆಗಿದೆ. ಎಲ್ಲರೂ ಭಾವನೆಗಳಿಗೆ ತಕ್ಕಂತೆ ಹೆಸರು ಕೇಳುತ್ತಿದ್ದಾರೆ. ಅದಕ್ಕಾಗಿ ಎರಡು ಪಂಗಡಗಳು ಜತೆಯಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಡುವೆ ರಾಜಕೀಯ ಪ್ರವೇಶ ಆಗದಂತೆ ನೋಡಿಕೊಳ್ಳಬೇಕಿದೆ. ಕೆಲವರು ಘಟನೆಯ ಲಾಭ ಪಡೆದು ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯ ಎಂದಿದ್ದಾರೆ.


