ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ : ಇಲ್ಲಿನ ಮೊಗವೀರಪಟ್ಣದಲ್ಲಿ ಸಮುದ್ರ ಪಾಲಾಗಿ ಕಲ್ಲಿನೆಡೆಯಲ್ಲಿ ಸಿಲುಕಿದ್ದ ತುಮಕೂರು ಶಿರಾ ನಿವಾಸಿ ಹಯಾಝ್ ಮೃತದೇಹವನ್ನು ಸಾಮಾಜಿಕ ಕಾರ್ಯಕರ್ತ ರಾಝಿಕ್ ಉಳ್ಳಾಲ್ ಅವರ ಶ್ರಮದಿಂದ ಬೃಹತ್ ಹಿಟಾಚಿ ತರಿಸಿ ಮೃತದೇಹವನ್ನು ಮೇಲೆತ್ತುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು, ಜಿಲ್ಲಾಡಳಿತ ವಿಫಲವಾಗಿದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಕಾರ್ಯಾಚರಣೆ ನಡೆಸಿದರು.
ಉಳ್ಳಾಲ ದರ್ಗಾಕ್ಕೆ ಬಂದಿದ್ದ ತುಮಕೂರು ಶಿರಾ ಮೂಲದ ಹತ್ತು ಮಂದಿಯ ತಂಡ ಬುಧವಾರ ಉಳ್ಳಾಲ ಮೊಗವೀರಪಟ್ಣ ಬಳಿಯ ಸಮುದ್ರದಲ್ಲಿ ಅಲೆಗಳೊದಿಗೆ ಆಟವಾಡುತ್ತಿದ್ದಾಗ ಇಬ್ಬರು ಸಮುದ್ರ ಪಾಲಾಗಿದ್ದರು. ಸಮದ್ರ ಪಾಲದ ಇಬ್ಬರು ಯುವಕರಲ್ಲಿ ಶಾರುಖ್ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದ್ದರೆ, ಹಯಾಝ್ ಮೃತದೇಹವನ್ನು ತೆಗೆಯಲು ಎರಡು ದಿನಗಳಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ಮುಳುಗು ತಜ್ಞರು, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಶ್ರಮಿಸಿದ್ದರು. ಬುಧವಾರ ರಾತ್ರಿ ಶಿವಾಜಿ ಜೀವರಕ್ಷಕ ತಂಡದ ಯೋಗೀಶ್ ಅಮೀನ್ ಮತ್ತು ರಾಜೇಶ್ ಪುತ್ರನ್ ಕಲ್ಲಿನೆಡೆಯಲ್ಲಿ ಸಿಲುಕಿದ್ದ ಮೃತದೇಹದ ಕಾಲಿಗೆ ಹಗ್ಗ ಕಟ್ಟಿ ಬಂದಿದ್ದು, ಗುರುವಾರ ಬೆಳಗ್ಗೆ ಹಿಟಾಚಿ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಗುರುವಾರ 10 ಗಂಟೆಗೆ ಜೆಸಿಬಿ ಮತ್ತು ಕ್ರೈನ್ ಮಾತ್ರ ಮೊಗವೀರಪಟ್ಣಕ್ಕೆ ಬಂದಿದ್ದು ಮಧ್ಯಾಹ್ನದ ಬಳಿಕ ಬಂದ ಸಣ್ಣ ಹಿಟಾಚಿಯಿಮದ ಮೃತದೇಹ ತೆಗೆಯುವ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಕಾರ್ಯಾಚರಣೆ ಶುಕ್ರವಾರಕ್ಕೆ ಮುಂದೂಡಿದ್ದರು :
ಗುರುವಾರ ರಾತ್ರಿಯಾಗುತ್ತಿದ್ದಂತೆ ಕಾರ್ಯಾಚರಣೆಯನ್ನು ಶುಕ್ರವಾರ ಬೆಳಗ್ಗಿನ ಜಾವಕ್ಕೆ ಮುಂದೂಡಿ ಅಧಿಕಾರಿಗಳು ಸೇರಿದಂತೆ ಮುಳುಗುತಜ್ಞರು, ಜೀವರಕ್ಷಕ ಈಜುಗಾರರು ವಾಪಾಸ್ ತೆರಳಿದ್ದರು. ಆದರೆ ನೆರೆದಿದ್ದ ನೂರಾರು ಜನರು ಮೃತದೇಹ ತೆಗೆಯುವ ಕಾರ್ಯ ವಿಫಲವಾಗಿದ್ದರಿಂದ ನಿರಾಶರಾಗಿದ್ದರು.
ಮಾನವೀಯತೆ ಮೆರೆದ ರಾಝಿಕ್ ಉಳ್ಳಾಲ್:
ಮೃತ ದೇಹ ತೆಗೆಯುವ ಕಾರ್ಯಾಚರಣೆಯಲ್ಲಿ ಮಾಹಿತಿ ನೀಡುತ್ತಿದ್ದ ರಾಝಿಕ್ ಉಳ್ಳಾಲ್ ಸಂಜೆ ವೇಳೆಗೆ ಈಗಿರುವ ಸಲಕರಣೆಗಳಿಂದ ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಅರಿತು ಸಚಿವ ಯು.ಟಿ.ಖಾದರ್ ಮಾರ್ಗದರ್ಶನದಲ್ಲಿ ನವಮಂಗಳೂರಿನ ಬೃಹತ್ ಹಿಟಾಚಿ ಹೊಂದಿದ್ದ ಸಂಸ್ಥೆಗಳ ಮಾಲಕರಿಗೆ ಫೋನಾಯಿಸಿದರು. ಈ ಸಂದರ್ಭದಲ್ಲಿ ಮಾನವೀಯತೆಯ ದೃಷ್ಟಿಯಿಂದ ಜಾರ್ಜ್ ಎಂಬವರು ಹಿಟಾಚಿ ನೀಡಲು ಒಪ್ಪಿದ್ದು ರಾತ್ರಿ ವೇಳೆಗೆ ಹಿಟಾಚಿ ಮೊಗವೀರಪಟ್ನ ಬೀಚ್ಗೆ ಆಗಮಿಸಿತ್ತು. ಹಿಟಾಚಿ ಚಾಲಕ ಮುಳುಗುತಜ್ಞರು ಇಲ್ಲದೆ ಕಾರ್ಯಾಚರಣೆ ಸಾಧ್ಯವಿಲ್ಲ ಎಂದಾಗ ಸ್ವತ: ರಾಝಿಕ್ ಉಳ್ಳಾಲ್ ಅವರು ನಾನೇ ಮುಳುಗುತಜ್ಞ ಎಂದು ಹೇಳಿ ಹಿಟಾಚಿಯಲ್ಲಿ ಕುಳಿತು ಮಾರ್ಗದರ್ಶನ ನೀಡಿದ್ದು, ಹಗ್ಗದ ಆಧಾರದಲ್ಲಿ ಕಲ್ಲುಗಳನ್ನು ಸರಿಸಿದ ಬಳಿಕ ಮೃತದೇಹ ಇದೆ ಎನ್ನುವುದು ಖಚಿತವಾಗುತ್ತಿದ್ದಂತೆ ಅಲೆಗಳ ಅಬ್ಬರದ ನಡುವೆಯೇ ಹಿಟಾಚಿಯ ಬಕೆಟ್ನಲ್ಲಿ ಕುಳಿತು ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಸುಮಾರು ಎರಡು ದಿನಗಳಿಂದ ಆಗದ ಕಾರ್ಯವನ್ನು ಕೇವಲ ಒಂದು ಗಂಟೆಯಲ್ಲಿ ಮುಗಿಸುವ ಮೂಲಕ ತಮ್ಮ ಸಾಹಸವನ್ನು ಮೆರೆದರು.
-ಸಂಜೆಯಿಂದ ಕಾರ್ಯಾಚರಣೆ ಸಾಧ್ಯವಿಲ್ಲ ಎನ್ನುವ ಮಾಹಿತಿ ಮೊಗವೀರಪಟ್ಣದಲ್ಲಿ ಮೃತದೇಹ ದೊರೆಯುವ ಹಂಬಲದಲ್ಲಿದ್ದ ಹಯಾಝ್ನ ಕುಟುಂಬದವರ ರೋಧನ ಮುಗಿಲು ಮುಟ್ಟಿದಾಗ ನಾನು ಸಚಿವರಿಗೆ ಮಾಹಿತಿ ನೀಡಿ ಹಿಟಾಚಿಯ ಮಾಲಕರನ್ನು ಸಂಪರ್ಕಿಸಿದೆ. ದೇವರ ದಯೆಯಿಂದ ಜಾರ್ಜ್ ಎನ್ನುವವರು ಹಿಟಾಚಿ ನೀಡಲು ಮುಂದೆ ಬಂದಿದ್ದರಿಂದ , ಮೊಗವೀರಪಟ್ಣದಲ್ಲಿ ಸೇರಿದ್ದ ಜನರ ಪ್ರಾರ್ಥನೆಯ ಬಲದಿಂದ ಒಂದು ಗಂಟೆಯ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಯಿತು. ಹಿಟಾಚಿ ಚಾಲಕನ ಧೈರ್ಯದಿಂದ ಜೀವದ ಹಂಗು ತೊರೆದು ಅಲೆಗಳ ಮದ್ಯೆಯೇ ಮೃತದೇಹವನ್ನು ಮೇಲೆ ತೆಗೆಯಲು ಸಾಧ್ಯವಾಯಿತು.
ರಾಝಿಕ್ ಉಳ್ಳಾಲ್ ಸಾಮಾಜಿಕ ಕಾರ್ಯಕರ್ತ


