ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸಹಾಯಕ ಖಾಝಿ ಅಬ್ದುಲ್ ರವೂಫ್ ಉಸ್ತಾದ್ರವರು ಉಡುಪಿ ಮತ್ತು ಮಂಗಳೂರು ಖಾಝಿಯವರು ಭಟ್ಕಳದಲ್ಲಿ ಚಂದ್ರದರ್ಶನವಾಗಿರುವ ಮಾಹಿತಿ ಪಡೆದು ಈದ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಲಾಗುತ್ತಿದೆ ಎಂದು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದ್ದಾರೆ.
ಅವರು ರವಿವಾರ ಉಳ್ಳಾಲ ಸೈಯ್ಯದ್ ಮದನಿ ದರ್ಗಾದಲ್ಲಿ ಈದ್ ವುಲ್ ಫಿತ್ರ್ ಪ್ರಯುಕ್ತ ನಡೆದ ವಿಶೇಷ ನಮಾಝ್ನಲ್ಲಿ ಭಾಗವಹಿಸಿ ಬಳಿಕ ಮಾತನಾಡಿದರು.
ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಮತ್ತು ಮಂಗಳೂರು ಖಾಝಿ ತ್ವಾಕಾ ಉಸ್ತಾದ್ರವರು ಭಟ್ಕಳದಲ್ಲಿ ಚಂದ್ರದರ್ಶನವಾಗಿರುವ ಬಗ್ಗೆ ನೀಡಲಾದ ಮಾಹಿತಿಯ ಮೇರೆಗೆ ಉಳ್ಳಾಲದಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಿಸಲಾಗಿದೆ. ಸೈಯದ್ ಫಝಲ್ ಕೋಯಮ್ಮ ತಂಙಳ್ ಅವರು ಒಂದು ವರ್ಷದಿಂದ ಉಳ್ಳಾಲದಲ್ಲಿ ಸಂಪರ್ಕ ಇಲ್ಲದ ಕಾರಣ ಸಹಾಯಕ ಖಾಝಿ ಅಬ್ದುಲ್ ರವೂಫ್ ಉಸ್ತಾದ್ ಅವರ ಮಾಹಿತಿ ಪಡೆದು ಹಬ್ಬವನ್ನು ಆಚರಿಸಲಾಗುತ್ತಿದೆ ಎಂದ ಅವರು ಈದುಲ್ ಫಿತ್ರ್ ಶಾಂತಿ, ಸೌರ್ಹಾದ ಸಾರುವ ಹಬ್ಬವಾಗಿದೆ. ಈ ಹಬ್ಬವು ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿಯನ್ನು ತರಲಿ. ಅಶಾಂತಿಯನ್ನು ಬಯಸುವವರು ಯಾರು ಕೂಡಾ ಇಲ್ಲ. ಕೆಲವು ಕಡೆ ದುಷ್ಕರ್ಮಿಗಳು ಅಶಾಂತಿಯನ್ನು ಸೃಷ್ಟಿಸುತ್ತಾರೆ. ಅಂತಹ ವಾತಾವರಣಕ್ಕೆ ಪೆÇ್ರೀತ್ಸಾಹ ನೀಡುವವರು ಇಲ್ಲ. ಉಳ್ಳಾಲದಲ್ಲಿ ಶಾಂತಿಯ ವಾತಾವರಣದಲ್ಲಿ ಹಬ್ಬವನ್ನು ಆಚರಿಸಲಾಗಿದೆ ಎಂದರು.
ಬಳಿಕ ಮಾತಾಡಿದ ಉಳ್ಳಾಲ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್, ಚಂದ್ರ ದರ್ಶನದ ಬಗ್ಗೆ ಹಲವು ವರ್ಷಗಳಿಂದ ಸಹಾಯಕ ಖಾಝಿಯಾದ ನಾನು ತೀರ್ಮಾನಿಸುತ್ತಿದ್ದು, ಭಟ್ಕಳದ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಈದುಲ್ ಫಿತ್ರ್ ಆಚರಿಸಲಾಗಿದೆ. ಇವತ್ತು ಉಪವಾಸ ಆಚರಿಸುವುದು ಹರಾಮ್ ಆಗಿರುತ್ತದೆ ಎಂದಿದ್ದಾರೆ.
ಆಹಾರ ಸಚಿವರಾದ ಯು.ಟಿ ಖಾದರ್ ಮಾತನಾಡಿ, ಈದ್ ಹಬ್ಬವು ಶಾಂತಿ ಸೌಹಾರ್ದದ ಹಬ್ಬ, ಎಲ್ಲೆಡೆ ಶಾಂತಿಯ ವಾತಾವರಣ ನೆಲೆಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಯು.ಕೆ ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಕೋಶಾಧಿಕಾರಿ ಯುಕೆ ಇಲ್ಯಾಸ್. ಅಡಿಟರ್ ಯು.ಟಿ ಇಲ್ಯಾಸ್, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಇಬ್ರಾಹೀಮ್ ಅಳೇಕಲ, ಸದಸ್ಯರಾದ ಅಲೀ ಮೋನು, ಹಮೀದ್ ಅಳೇಕಲ, ಮುಸ್ತಫ ಮಂಚಿಲ, ಮಯ್ಯದ್ದಿ ಕೋಡಿ, ಯೂಸುಫ್ ಲೀಗ್, ಬಾವ ಫಕೀರ್ ಸಾಬ್, ಎಸ್. ಉಮರಬ್ಬ, ಕುಂಞÂ ಅಹ್ಮದ್ ಅಳೆಕಲ ಅಬೂಬಕ್ಕರ್ ಅಲೀ ನಗರ ಮತ್ತಿತರರು ಉಪಸ್ಥಿತರಿದ್ದರು.
ಕೂರ ತಂಙಳ್ ವಿರುದ್ಧ ಅಸಮಾಧಾನ
ಉಳ್ಳಾಲ ದರ್ಗಾ ಅಧೀನದ ನಾಲ್ಕು ಮಸೀದಿಗಳಾದ ಮಾಸ್ತಿಕಟ್ಟೆ ಆಝಾದ್ ನಗರ ಫಾರುಕ್ ಮಸೀದಿ, ಮುಕ್ಕಚ್ಚೇರಿ ಅಬೂಬಕರ್ ಸಿದ್ದೀಖ್ ಜುಮಾ ಮಸೀದಿ, ಅಳೇಕಲದ ಅಲ್ ಅಮೀನ್ ಜುಮಾ ಮಸೀದಿ, ಒಂಭತ್ತುಕೆರೆ ಜಮಾ ಮಸೀದಿ ಗಳನ್ನು ಹೊರತುಪಡಿಸಿ ಬಾಕಿ 29 ಮಸೀದಿಗಳಲ್ಲಿ ಇಂದು ಈದ್ ವುಲ್ ಫಿತ್ರ್ ಆಚರಿಸಲಾಗಿದೆ. ಭಾನುವಾರ ಪೆರ್ನಾಲ್ ಆಚರಣೆ ಎಂದು ಎಲ್ಲಾ ಮಸೀದಿಗಳಲ್ಲಿ ಘೋಷಣೆಯಾದ ನಂತರ ತಡರಾತ್ರಿ ಉಳ್ಳಾಲದ ಖಾಝಿ ಕೂರ ತಂಙಳ್ ತನ್ನ ವ್ಯಾಪ್ತಿಗೆ ಒಳಪಡುವವರು ನಾಳೆ ಉಪವಾಸ ಹಿಡಿಯಲೇಬೇಕು ಎಂದು ದೂರವಾಣಿ ಮುಖೇನ ಉಳ್ಳಾಲಕ್ಕೆ ತಿಳಿಸಿದ್ದರು. ಸಾಧಾರಣ ಒಂದು ಪ್ರದೇಶದಲ್ಲಿ ಚಂದ್ರ ದರ್ಶನವಾದರೆ ಸಮೀಪದ ಖಾಝಿಗಳು ಪರಸ್ಪರ ಚರ್ಚಿಸಿ ತೀರ್ಮಾನಗೈಯ್ಯುವುದು ವಾಡಿಕೆ. ಇದೇ ರೀತಿ ಉಡುಪಿ ಮತ್ತು ಮಂಗಳೂರು ಖಾಝಿಯವರು ಭಾನುವಾರ ಪೆರ್ನಾಲ್ ಎಂದು ಘೋಷಿಸಿದ್ದರು. ಆದರೆ ಉಳ್ಳಾಲ ಖಾಝಿಯವರು ಯಾರೊಂದಿಗೂ ಚರ್ಚಿಸದೆ ತಡರಾತ್ರಿ ವೇಳೆ ನಾಳೆ ಉಪವಾಸ ಹಿಡಿಯಲೇ ಬೇಕು ಎಂದು ಸಾಧಾರಣ ಜನರಿಗೆ ಒತ್ತಡ ಹೇರಿರುವುದು ಖಂಡನೀಯ ಎಂಬ ಅಭಿಪ್ರಾಯಗಳು ಉಳ್ಳಾಲ ದರ್ಗಾಕ್ಕೆ ಬಂದವರಿಂದ ವ್ಯಕ್ತವಾಯಿತು.
ಇತ್ತಂಡಗಳ ಹೊೈಕೈ
ಶನಿವಾರ ತಡರಾತ್ರಿ ವೇಳೆ ದರ್ಗಾ ವಠಾರದೊಳಗೆ ಇತ್ತಂಡಗಳ ನಡುವೆ ಗುಂಪು ಘರ್ಷಣೆ ನಡೆದಿತ್ತು. ಉಳ್ಳಾಲ ಖಾಝಿ ಕೂರ ತಂಙಳ್ ಅವರಿಗೆ ಚಂದ್ರ ದರ್ಶನ ಆಗದಿರುವ ಹಿನ್ನೆಲೆಯಲ್ಲಿ ಈದ್ ವುಲ್ ಫಿತ್ರ್ ಹಬ್ಬವನ್ನು ಭಾನುವಾರ ಆಚರಿಸಬಾರದೆಂದು ದರ್ಗಾ ವಠಾರದೊಳಕ್ಕೆ ಆಗಮಿಸಿದ ಒಂದು ತಂಡ , ಮೈಕಿನಲ್ಲಿ ಘೋಷಣೆಯನ್ನು ಕೂಗಿತ್ತು. ಇದರಿಂದ ಇತ್ತಂಡಗಳ ನಡುವೆ ಹೊೈಕೈ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮತ್ತೆ ಇಂದೇ ಪೆರ್ನಾಲ್ ಎಂದು ದರ್ಗಾ ಆಡಳಿತ ಮಂಡಳಿ ಮೈಕಿನಲ್ಲಿ ಘೋಷಿಸಿದ್ದು, ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.














