ಉಳ್ಳಾಲ ನ್ಯೂಸ್ ನೆಟ್‍ವರ್ಕ್
ದೇರಳಕಟ್ಟೆ: ಮನಸ್ಸಿನ ಗೊಂದಲಗಳ ಮಧ್ಯೆ ಬದುಕುವವರ ಸೇವೆ ಹಾಗೂ ಅವರ ಜತೆಗೆ ಹಬ್ಬದ ಆಚರಣೆ ನಡೆಸುವುದರ ಮೂಲಕ ಅವರ ಬಾಳಿನಲ್ಲೂ ಸ್ಫೂರ್ತಿ ತುಂಬಿಸುವ ಕೆಲಸ ಹೆಲ್ಪ್ ಇಂಡಿಯಾ ಫೌಂಡೇಶನ್ನಿನಿಂದ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.
ಅವರು ಹೆಲ್ಪ್ ಇಂಡಿಯಾ ಫೌಂಡೇಷನ್ ಆಯೋಜಿಸಿದ್ದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾನಸಿಕ ರೋಗಿಗಳ ಜತೆಗಿನ ಈದ್ ಉಲ್ ಫಿತರ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಒಳ್ಳೆಯ ಉದ್ದೇಶ ಇಟ್ಟುಕೊಂಡು ಉಪವಾಸ ಆಚರಣೆ ಬಳಿಕ ನಡೆಯುವ ಹಬ್ಬ ಈದ್ ಉಲ್ ಫಿತರ್ ಆಚರಣೆ ಸಮಾಜದಲ್ಲಿ ಎಲ್ಲರಿಗೂ ಪ್ರೇರಣೆಯಾಗಿದೆ. ಯುವಕರ ಯೋಚನೆಗಳ ಜತೆಗೆ ಹಿರಿಯ ಆಲೋಚನೆಗಳು ಬದಲಾದಲ್ಲಿ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮ ಪರಿಸರದಲ್ಲಿ ಸಾಮರಸ್ಯ ಕಾಪಾಡಲು ಪ್ರೇರಣಾದಾಯಕ ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಮಾತನಾಡಿ ಪ್ರತಿಯೊಂದು ಸಂಘ ಸಂಸ್ಥೆಗಳ ಹಿಂದೆ ಸ್ವಾರ್ಥ ಇರುತ್ತದೆ. ಆದರೆ ಹೆಲ್ಪ್ ಇಂಡಿಯಾದ ಸದಸ್ಯರು ಸ್ವಾರ್ಥವಿಲ್ಲದೆ ಸೌಹಾರ್ದಯುತವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಝಾಕಿರ್, ಉದ್ಯಮಿ ಹಂಝ, ಜೀವನ್ ಕುಮಾರ್ ತೊಕ್ಕೊಟ್ಟು, ಪುರುಷೋತ್ತಮ್ ಕಲ್ಲಾಪು ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಸ್ವಾಗತಿಸಿದರು. ಶಕೀಲ್ ತುಂಬೇಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


