ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ :ಅಪಘಾತ ನಡೆಸಿ ಕಾರಿನಲ್ಲಿದ್ದವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನು ಐದು ಮಂದಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಜ್ಜಿನಡ್ಕ ನಿವಾಸಿ ಸಾದಿಕ್ (24) ಎಂಬಾತನನ್ನು ಬಂಧಿಸಲಾಗಿದೆ. ಜೂ.21ರ ಮಧ್ಯಾಹ್ನ ವೇಳೆ ಬಜಪೆ ವಿಮಾನ ನಿಲ್ದಾಣದಿಂದ ವಾಪಸ್ಸಾಗುತ್ತಿದ್ದ ಕೇರಳ ತ್ರಿಕರಿಪುರ ನಿವಾಸಿಗಳಾದ ತಾಹೀಝ್ ಮತ್ತು ಅಶ್ರಫ್ ಎಂಬವರನ್ನು ತಂಡ ಅಪಹರಣಕ್ಕೆ ಯತ್ನಿಸಿತ್ತು. ಆಗಷ್ಟೇ ವಿದೇಶದಿಂದ ವಾಪಸ್ಸಾಗಿದ್ದ ಅಶ್ರಫ್ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದರೆ ತಾಹೀಝ್ ನನ್ನು ತಂಡ ಅಪಹರಣ ನಡೆಸಿ ರೂ. 5 ಲಕ್ಷದ ಬೇಡಿಕೆ ಮುಂದಿಟ್ಟಿತ್ತು. ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸರು ಜಂಟಿಯಾಗಿ ನಿರಂತರ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತಡರಾತ್ರಿ ವೇಳೆ ಅಪಹೃತ ತಾಹೀಝನನ್ನು ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಈ ಕುರಿತು ಪ್ರಕರಣ ಉಳ್ಳಾಲ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಓರ್ವನನ್ನು ಬಂಧಿಸಲಾಗಿದ್ದು ಇನ್ನು ಕಡಂಬಾರು, ಮಂಜೇಶ್ವರ ನಿವಾಸಿಗಳಾದ ಐದು ಮಂದಿಯ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.
ಕೃತ್ಯವನ್ನೇ ಉದ್ಯೋಗವಾಗಿಸಿದ ತಂಡ
ಸಾದಿಕ್ ಮತ್ತು ಐದು ಮಂದಿಯ ತಂಡ ಇದೇ ರೀತಿಯ ಕೃತ್ಯದಲ್ಲಿ ಸಕ್ರಿಯವಾಗಿರುವುದಾಗಿ ತನಿಖೆ ವೇಲೆ ಬೆಳಕಿಗೆ ಬಂದಿದೆ. ಬೇಕೆಂದೇ ಅಪಘಾತ ನಡೆಸಿ ಸುಲಿಗೆ ನಡೆಸುವುದನ್ನೇ ತಂಡ ಉದ್ಯೋಗವನ್ನಾಗಿಸಿತ್ತು. ಕೇರಳ ಕಡೆಗೆ ತೆರಳುವ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ತಂಡ ಅವರಿಗೆ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದರು. ಆದರೆ ತಂಡದ ಕೃತ್ಯಕ್ಕೆ ಬೆದರಿ ಯಾರೂ ಪೊಲೀಸ್ ದೂರು ಕೊಡಲು ಮುಂದಾಗುತ್ತಿರಲಿಲ್ಲ. ಇತ್ತೀಚೆಗೆ ಕೊಣಾಜೆ ಸಮೀಪ ಶಿಕಾರಿಗೆ ತೆರಳುತ್ತಿದ್ದ ತಂಡವನ್ನು ಬೆದರಿಸಿದ್ದ ಇದೇ ತಂಡ ಅವರಿಂದ ರೂ.1 ಲಕ್ಷ ಹಣದ ಬೇಡಿಕೆಯನ್ನು ಮುಂದಿಟ್ಟಿತ್ತು. ಆದರೆ ಈವರೆಗೂ ಕೊಣಾಜೆ ಪೊಲೀಸ್ ಠಾಣೆಯಲ್ಲೂ ಈ ಕುರಿತು ದೂರುಗಳು ದಾಖಲಾಗಿರಲಿಲ್ಲ.


