ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡು ಶಾಖೆಯಲ್ಲಿನ ಸಿಬ್ಬಂದಿಗೆ ಚೂರಿ ತೋರಿಸಿ ಶೌಚಾಲಯದೊಳಕ್ಕೆ ಕೂಡಿ ಹಾಕಿ ಕೋಟ್ಯಂತರ ರೂ. ಬೆಲೆಬಾಳುವ ಚಿನ್ನಾಭರಣವನ್ನು ದರೋಡೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಶುಕ್ರವಾರ ಕೆಲ ಸಿಬ್ಬಂದಿ ಮಸೀದಿಗೆ ತೆರಳುವ ಮಾಹಿತಿ ಪಡೆದಿದ್ದ ದರೋಡೆಕೋರರು ಬೈಕಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ.
ಮಧ್ಯಾಹ್ನ ವೇಳೆ ಕೇವಲ 3 ಸಿಬ್ಬಂದಿ ಮಾತ್ರವಿದ್ದು, ಈ ವೇಳೆ ಚೂರಿ ಹಿಡಿದುಕೊಂಡು ಒಳನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ಶೌಚಾಲಯದೊಳಕ್ಕೆ ಕೂಡಿಹಾಕಿ ಬಾಗಿಲು ಮುಚ್ಚಿದ್ದರು. ಬಳಿಕ ಲಾಕರಿನಲ್ಲಿದ್ದ ಚಿನ್ನವನ್ನು ಗೋಣಿಚೀಲದಲ್ಲಿ ತುಂಬಿಸಿದ ಇಬ್ಬರು ದರೋಡೆಕೋರರು ಬೈಕಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಂತೆಯೇ, ಶೌಚಾಲಯದ ಬಾಗಿಲು ಮುರಿದು ಹೊರಬಂದ ಸಿಬ್ಬಂದಿ ರಾಮಚಂದ್ರ ಎಂಬವರು ಕಲ್ಲನ್ನೆತ್ತಿ ದರೋಡೆಕೋರನೋರ್ವನ ಹೃದಯಭಾಗಕ್ಕೆ ಎಸೆದಿದ್ದ. ಆದರೆ ಇಬ್ಬರು ಗೋಣಿಚೀಲ ಸಮೇತ ಮತ್ತೆ ಪರಾರಿಯಾಗಲು ಯತ್ನಿಸಿದಾಗ ಮತ್ತೊಂದು ಕಲ್ಲನ್ನು ಹಿಂಬದಿ ಕುಳಿತಿದ್ದವನ ಮೇಲೆ ಎಸೆದಿದ್ದಾನೆ. ಇದರಿಂದ ಬೆದರಿದ ದರೋಡೆಕೋರ ಗೋಣಿಚೀಲವನ್ನು ಸ್ಥಳದಲ್ಲೇ ಎಸೆದು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸಿಪಿ ಶೃತಿ, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಹಾಗೂ ಪೊಲೀಸರ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.




