ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಮೊಗವೀರಪಟ್ನ ಸಮುದ್ರ ತೀರದಿಂದ 700 ಮೀ ದೂರದಲ್ಲಿ ಕಡಲ್ಕೊರೆತ ಕಾಮಗಾರಿ ನಿರತ ಬಾರ್ಜ್ ದುರಂತ ನಡೆದು 18 ದಿನಗಳು ಕಳೆದಿದ್ದು, ಬುಧವಾರ ಬಂದರಿನಿಂದ ಟಗ್ ಮೂಲಕ ಸಿಂಗಾಪುರದ ತಾಂತ್ರಿಕ ತಂಡ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದರೆ, ಬಾರ್ಜ್ ಮಾಲೀಕರು ಹಾಗೂ ಬಂದರು ಅಧಿಕಾರಿಗಳು ಮೊಗವೀರಪಟ್ನಕ್ಕೆ ಭೇಟಿ ನೀಡಿದರು.
ಜೂ.3 ರಂದು ಕಡಲ್ಕೊರೆತದ ಶಾಶ್ವತ ತಡೆಗೋಡೆ ಕಾಮಗಾರಿಗಾಗಿ ಸಮುದ್ರ ತೀರದಿಂದ 700 ಮೀ ದೂರದಲ್ಲಿ ನಿಲ್ಲಿಸಲಾಗಿದ್ದ ಬಾರ್ಜ್ ಸಮುದ್ರದ ಅಲೆಗಳಿಗೆ ಸಿಲುಕಿ ತಡೆಗೋಡೆಯ ಕಲ್ಲುಗಳಿಗೆ ಸಿಲುಕಿ ಹಾನಿಯಾಗಿತ್ತು. ಪರಿಣಾಮ ಸಮುದ್ರದ ನೀರು ಒಳನುಗ್ಗಿ ಮುಳುಗಲು ಆರಂಭವಾಗಿದ್ದ ಬಾರ್ಜ್‍ನಿಂದ 27 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ದಿನ ಕಳೆದಂತೆ ಹೆಚ್ಚು ಮುಳುಗಲು ಆರಂಭವಾಗುತ್ತಿದ್ದಂತೆ ತೈಲ ಸೋರಿಕೆ ಕುರಿತು ಸ್ಥಳೀಯರಿಂದ ಆರೋಪ ಕೇಳಿಬಂದಿತ್ತು. ಅದಕ್ಕಾಗಿ ಜಿಲ್ಲಾಡಳಿತ ತುರ್ತಾಗಿ ಬಾರ್ಜ್ ಸಮುದ್ರಕ್ಕಿಳಿಸಿದ ಧರ್ತಿ ಕಂಪೆನಿ ಅಧಿಕಾರಿಗಳಿಗೆ ಮಾಲಿನ್ಯ ಕುರಿತು ಎಚ್ಚರ ವಹಿಸುವಂತೆಯೂ, ಸ್ಥಳೀಯವಾಗಿ ಮಲಿನವಾಗದಂತೆ ಎರಡು ದಿನಗಳಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಈ ಕುರಿತು ಪರಿಸರ ಇಲಾಖೆಯೂ ಧರ್ತಿ ಕಂಪೆನಿಗೆ ನೋಟೀಸು ಜಾರಿ ಮಾಡಿ ವರದಿ ನೀಡುವಂತೆ ಸೂಚಿಸಿತ್ತು.
ನಾಲ್ವರು ಸಿಬ್ಬಂದಿ ನೇಮಕ : ಬಾರ್ಜ್ ನಿಂದ ತೈಲ ಸೋರಿಕೆ ಅಥವಾ ಯಾವುದೇ ರೀತಿಯ ಮಾಲಿನ್ಯ ಉಂಟಾದಲ್ಲಿ ಅದರ ತಡೆಗೆ ಮೊಗವೀರಪಟ್ನ ನಿವಾಸಿ ನಾಲ್ವರು ಸಿಬ್ಬಂದಿಯನ್ನು ನೇಮಿಸಲಾಗಿದೆ. ಬಾರ್ಜ್‍ನಿಂದ ತೇಲಿಬಂದ ಸೊತ್ತುಗಳನ್ನು ಸಂಗ್ರಹಿಸಲು ಮತ್ತು ತೈಲ ಸೋರಿಕೆ ಉಂಟಾದಲ್ಲಿ ತುರ್ತು ಕ್ರಮ ತೆಗೆದುಕೊಳ್ಳಲು ನೇಮಿಸಲಾಗಿದೆ. ತುರ್ತಾಗಿ ನಾಲ್ಕು ಸ್ಪ್ರೇ ಯಂತ್ರಗಳನ್ನು ಸ್ಥಳದಲ್ಲಿ ಇರಿಸಲಾಗಿದೆ. ಅಗತ್ಯ ಬಿದ್ದಲ್ಲಿ ಅದನ್ನು ಉಪಯೋಗಿಸಲಾಗುವುದು ಆಧರೆ 18 ದಿನಗಳಲ್ಲಿ ಉಪಯೋಗಕ್ಕೆ ಬಂದಿಲ್ಲ ಅನ್ನುವುದು ಸಿಬ್ಬಂದಿ ಅಭಿಪ್ರಾಯ.
ಸಿಂಗಾಪುರದಿಂದ ಬಂದಿರುವ ತಾಂತ್ರಿಕ ತಂಡ ನವಬಂದರು ಮೂಲಕ ಬಾರ್ಜ್‍ನತ್ತ ತೆರಳಿದೆ. ಕೋಸ್ಟ್‍ಗಾರ್ಡ್ ಪೊಲೀಸರ ಸಹಕಾರದೊಂದಿಗೆ ತಂಡ ಟಗ್ ಮೂಲಕ ಪರಿಶೀಲನೆ ನಡೆಸಿದೆ. ತೈಲ ತೆಗೆಯುವುದು ಮತ್ತು ಬಾರ್ಜ್‍ನಲ್ಲಿರುವ ಯಂತ್ರಗಳನ್ನು ಮೇಲೆತ್ತುವ ಕುರಿತು ಅಧ್ಯಯನ ನಡೆಸಿದ್ದು, ಕಂಪೆನಿ ಅಧಿಕೃತರೇ ಪರಿಶೀಲನೆ ಹೊಣೆಯನ್ನು ಹೊತ್ತಿದ್ದಾರೆ. ಈ ಕುರಿತ ವೀಕ್ಷಣೆಗೆ ಸ್ಥಳಕ್ಕಾಗಮಿಸಿದ್ದೇವೆ. ಕಲ್ಲುಗಳ ಮೇಲೆ ಸಿಲುಕಿರುವ ಬಾರ್ಜ್‍ನಿಂದ ರೀಫ್‍ಗೆ ಯಾವುದೇ ಹಾನಿಯಿಲ್ಲ. ಅದರಿಂದ ಬಾಜ್ ್ ದಿನ ಹೋದಂತೆ ಹಾನಿಯುಂಟಾಗಿ ಮುಳುಗುತ್ತಿದೆ. ಪರಿಶೀಲನೆ ನಡೆಸಿದ ತಂಡ ನೀಡಿದ ವರದಿಯಂತೆ , ಬಾರ್ಜ್‍ನ್ನು ಗ್ಯಾಸ್ ವೆಲ್ಡ್ ಮೂಲಕ ತುಂಡು ತುಂಡುಗಳನ್ನಾಗಿ ಬೇರ್ಪಡಿಸಿ ಮೇಲಕ್ಕೆತ್ತುವ ಪ್ರಯತ್ನ ನಡೆಯಲಿದೆ. ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮೇಲಕ್ಕೆತ್ತುವ ವಿಶ್ವಾಸವನ್ನು ಕಂಪೆನಿ ಬಂದರು ಇಲಾಖೆಗೆ ನೀಡಿದೆ.
ಗೋಪಾಲ್ ನಾಯ್ಕ್
ಎಡಿಬಿ ಯೋಜನಾಧಿಕಾರಿ
`1,400 ಲೀ ಮಾತ್ರ ತೈಲ ಇದೆ ‘
ಬಾರ್ಜ್‍ನಿಂದ ಸ್ಥಳೀಯವಾಗಿ ಯಾವುದೇ ಮಾಲಿನ್ಯವಾಗುವುದಿಲ್ಲ. ಅದರೊಳಗಿರುವುದು ಕೇವಲ 1,500 ಲೀ ಡೀಸಿಲ್ ಅವೆಲ್ಲವೂ ಟ್ಯಾಂಕ್ ಗಳ ಮೂಲಕ ಸೀಲ್ ಮಾಡಿಡಲಾಗಿತ್ತು. ಅವು ಸೋರಿಕೆಯಾಗಲು ಸಾಧ್ಯವಿಲ್ಲ. ಸ್ಥಳದಲ್ಲಿ ಮಾಲಿನ್ಯ ನಡೆಯಲು ಸಾಧ್ಯವೇ ಇಲ್ಲ. ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆಯ ಆದೇಶದಂತೆ ಸ್ಥಳದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ 15 ದಿನಗಳಿಂದ ಘಟನೆ ನಡೆದ ಸ್ಥಳದ ಸಮುದ್ರದ ನೀರು ಪರಿಶೀಲನೆಗಾಗಿ ಕೊಂಡೊಯ್ಯಲಾಗುತ್ತಿದೆ. ಬೆಂಗಳೂರಿನಿಂದ ಪ್ರತಿದಿನ ಸಮುದ್ರದ ನೀರಿನ ವರದಿಯೂ ಸಿಗುತ್ತಿದೆ. ಈವರೆಗೆ ತೈಲ ಸೋರಿಕೆಯಾಗಿರುವ ಯಾವುದೇ ಕುರುಹುಗಳಿಲ್ಲ. ಕೋಟ್ಯಂತರ ನಷ್ಟ ಉಂಟಾಗಿದೆ, ನಷ್ಟ ಕುರಿತ ವೆಚ್ಚದ ವಿವರ ನೀಡಲು ಅಸಾಧ್ಯ. ಮುಳುಗಿರುವ ಬಾರ್ಜ್ ಮತ್ತು ಅದನ್ನು ಮೇಲಕ್ಕೆತ್ತುವ ಪ್ರಯತ್ನ ಹಾಗೂ ತುರ್ತು ಕ್ರಮಗಳಿಗೆ ಇನ್ಶುರೆನ್ಸ್ ಕಂಪೆನಿ ಸಹಕರಿಸುತ್ತಿದೆ. ಸದ್ಯ ಸಿಂಗಾಪುರದ ತಂಡ ಮಾಹಿತಿ ಸಂಗ್ರಹಿಸಿದ್ದು, ಅವರು ನೀಡುವ ವರದಿಯಂತೆ ಬಾರ್ಜ್ ಮೇಲಕ್ಕೆತ್ತುವ ಪ್ರಯತ್ನ ನಡೆಸಲಾಗುವುದು.
ದಿಲೀಪ್ ಷಾ
ಬಾರ್ಜ್ ಮಾಲೀಕರು










