ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರವನ್ನು ರಕ್ಷಿಸುವುದರ ಜೊತೆಗೆ ರೋಗದಿಂದ ದೂರವಿರಬಹುದು. ಈ ನಿಟ್ಟಿನಲ್ಲಿ ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಬೇಕಿದೆ ಎಂದು ನರೇಗಾದ ಮಾಜಿ ಒಂಬುಡ್ಸ್‍ಮೆನ್ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.
ಮುಡಿಪು ಜನಶಿಕ್ಷಣ ಟ್ರಸ್ಟ್ ವತಿಯಿಂದ ಕೊಣಾಜೆ ಗ್ರಾಮ ಪಂಚಾಯಿತಿ, ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ ಕೊಣಾಜೆ ವೇದಾವತಿ ಗಟ್ಟಿ ಎಂಬವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಮಹಿಳೆಯರಿಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಗ್ರಾಮದ ಜನರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕಿದೆ. ಪ್ಲಾಸ್ಟಿಕ್ ಸುಡುವುದು, ಎಲ್ಲೆಂದರಲ್ಲಿ ಎಸೆಯುವುದರಿಂದ ಕ್ಯಾನ್ಸರ್‍ನಂತಹ ಮಾರಕ ರೋಗ ಬರುತ್ತದೆ, ಇಂತಹ ರೋಗದಿಂದ ದೂರವಿಡಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಮನೆಯಿಂದಲೇ ದೂರ ಇಡಬೇಕಾಗಿದೆ ಎಂದು ಹೇಳಿದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಸದಸ್ಯರಾದ ರವೀಂದ್ರ, ಅಚ್ಚುತ ಗಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಪಾವೂರು, ಕಾರ್ಯದರ್ಶಿ ಶಾಲಿನಿ, ಪೂರ್ಣಿಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.




