ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಪಜೀರು: ಚೀನಾ ವಸ್ತುಗಳನ್ನು ಧಿಕ್ಕರಿಸಿ ಗೋವಿನ ಉತ್ಪನ್ನಗಳನ್ನು ದೇಶಾದ್ಯಂತ ಹೆಚ್ಚು ಬಳಸುವ ಮೂಲಕ ದ್ರೋಹಿ ರಾಷ್ಟ್ರಗಳಿಗೆ ಬುದ್ದಿ ಕಲಿಸಬೇಕಿದೆ ಎಂದು ಉತ್ತರಕಾಶಿ ಕಪಿಲಾಶ್ರಮದ ಸ್ವಾಮೀಜಿ ಶ್ರೀ ರಾಮಚಂದ್ರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಅವರು ಪಜೀರು ಬೀಜಗುರಿಯ ಗೋವನಿತಾಶ್ರಯ ಟ್ರಸ್ಟ್‍ನಲ್ಲಿ ಭಾನುವಾರ ನಡೆದ ಬನಶಂಕರಿಯ ಆರಾಧನೆ ಕಾರ್ಯಕ್ರಮ ಮತ್ತು ನಂದಿನಿ ಪುಷ್ಕರಣಿ ಕೆರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಗೋವನ್ನು ರಾಷ್ಟ್ರಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಇದು ಸಾಧ್ಯವಾಗದಿದ್ದರೂ ಗೋವನ್ನು ಮಾತೆಯ ರೂಪದಲ್ಲಿ ಕಾಣುತ್ತಿರುವುದರಿಂದ ಸರಕಾರವು ಗೋವನ್ನು ರಾಷ್ಟ್ರಮಾತೆಯಾಗಿ ಘೋಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೋಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಗಟ್ಟಿ ವಗ್ಗ ಅವರು, ಪಜೀರಿನ ಗೋವನಿತಾಶ್ರಯ ಟ್ರಸ್ಟ್ ಕಳೆದ ಹದಿನೆಂಟು ವರ್ಷಗಳಿಂದ ಗೋಪಾಲಕೃಷ್ಣನ ಆರಾಧನೆಯೊಂದಿಗೆ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ.
ಆದ್ದರಿಂದ ನಾವೆಲ್ಲರೂ ಗೋವಿನ ಸೇವೆಗೆ ಕೈಯಿಂದಾಗುವ ಸಹಕಾರ ಮಾಡಬೇಕಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿ ಶ್ರೀಧರ್ ಭಟ್ ವಹಿಸಿದ್ದರು.
ಈ ವೇಳೆ ಗೋಪಾಲಕೃಷ್ಣ ಪೂಜೆ, ಬನಶಂಕರಿಯ ಆರಾಧನೆ, ಗೋಪೂಜೆ ನಡೆದು ಬಳಿಕ ನಂದಿನಿ ಪುಷ್ಕರಣಿ ಕೆರೆಯನ್ನು ಶ್ರೀ ರಾಮಚಂದ್ರ ಸ್ವಾಮೀಜಿ ಅವರು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸೇವೆಯಲ್ಲಿ ಸಹಕರಿಸಿದ ಸ್ಟೀವನ್ ಲಾಯ್ ಡಿಸೋಜ ಹಾಗೂ ಗಿರಿಧರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಟ್ರಸ್ಟಿ ಹಿತೇಂದ್ರ ಶಾ, ಸಮಾಜಸೇವಕ ಚಂದ್ರಹಾಸ್ ಪೂಂಜಾ, ಟ್ರಸ್ಟಿ ಡಾ.ಅನಂತಲಕ್ಷ್ಮೀ ಭಟ್ ಉಪಸ್ಥಿತರಿದ್ದರು.
ಗೋವನಿತಾಶ್ರಯ ಟ್ರಸ್ಟ್‍ನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಅನಂತ ಕೃಷ್ಣ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ತುಳಜಾರಾಂ ಅವರು ವಂದಿಸಿದರು.


