ಉಳ್ಳಾಲ ನ್ಯೂಸ್ ನೆಟ್ವರ್ಕ್
ಕೊಣಾಜೆ: ಮುಡಿಪುವಿನ ಹಾಲು ಉತ್ಪಾದಕರ ಸಂಘಕ್ಕೆ ಹಾಲು ತಂದಿದ್ದ ವ್ಯಕ್ತಿಯೋರ್ವರು ಹಾಲಿನ ಗುಣಮಟ್ಟ ಕಡಿಮೆ ಇದೆ ಎಂದು ಹೇಳಿ ವಾಪಸ್ಸು ಕೊಟ್ಟದಕ್ಕೆ 16-10-2013ರಂದು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಸಜೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದೆ.
ಮುಡಿಪುವಿನ ಹಾಲು ಉತ್ಪಾದಕರ ಸಂಘಕ್ಕೆ ಬೋಳಿಯಾರ್ ವಾದಿರಾಜ್ ಎಂಬವರು ಹಾಲು ಮಾರಾಟ ಮಾಡಲು ಹಾಲು ತಂದಿದ್ದರು. ಈ ಸಂದರ್ಭದಲ್ಲಿ ಉತ್ಪಾದಕರ ಸಂಘದ ಹಾಲು ಸಂಗ್ರಹಿಸುತಿದ್ದ ಮಿತ್ತಕೋಡಿಯ ಹೇಮಂತ ಎಂಬವರು ಹಾಲಿನ ಗುಣಮಟ್ಟ ಪರೀಕ್ಷಿಸಿದ್ದು ಗುಣಮಟ್ಟ ಕಡಿಮೆಯಿದ್ದುದರಿಂದ ಹಾಲನ್ನು ವಾಪಸ್ಸು ನೀಡಿದ್ದರು. ಇದರಿಂದ ಆಕ್ರೋಶಗೊಂಡ ವಾದಿರಾಜ ಅವರು ಹಾಲನ್ನು ಅಲ್ಲೇ ಚೆಲ್ಲಿ ಹೇಮಂತ್ ಅವರನ್ನು ದೂಡಿ ಹಾಕಿ ಹಲ್ಲೆ ನಡೆಸಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹೇಮಂತ್ ಅವರು ಕೊಣಾಜೆ ಠಾಣೆಗೆ ದೂರು ನೀಡಿದ್ದರು.


