ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಚೆಂಬುಗುಡ್ಡೆ: ಅಭಿವೃದ್ಧಿಯ ಉಳ್ಳಾಲದ ಚೆಂಬುಗುಡ್ಡೆ ಸಮೀಪ ಕಾರ್ಯಾಚರಿಸುತ್ತಿರುವ 33 ಕೆ.ವಿ ವಿದ್ಯುತ್ ಘಟಕಕ್ಕೆ ಅಧಿಕ ಒತ್ತಡ ಬೀಳುತ್ತಿರುವುದರಿಂದ ಚೆಂಬುಗುಡ್ಡೆಯಲ್ಲಿ 110 ಕೆ.ವಿ, ಉಳ್ಳಾಲ ಅಬ್ಬಕ್ಕ ವೃತ್ತದ ಬಳಿಕ 33 ಹಾಗೂ ಕೋಟೆಕಾರ್‍ನಲ್ಲಿ 33 ಕೆ.ವಿ. ಸಾಮಥ್ರ್ಯದ ವಿದ್ಯುತ್ ಘಟಕ ನಿರ್ಮಿಸುವ ಯೋಜನೆಯಿದೆ ಎಂದು ಮಂಗಳೂರು ಮೆಸ್ಕಾಂನ ಅಧೀಕ್ಷಕ ಅಭಿಯಂತರ ಮಂಜಪ್ಪ ಅಧಿಕಾರಿಗಳಿಗೆ ಹೇಳಿದರು.
ಚೆಂಬುಗುಡ್ಡೆಯಲ್ಲಿರುವ ಉಳ್ಳಾಲ ಮೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಉಳ್ಳಾಲ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಘಟಕಗಳ ಸ್ಥಾಪನೆಗೆ ಇಲಾಖೆ ಮುಂದಾಗಿದೆ. ಅಬ್ಬಕ್ಕ ವೃತ್ತದ ಬಳಿ ನಗರಸಭೆಯಿಂದ ಜಮೀನು ಗುರುತಿಸಿ ನೀಡಿದರೆ ಕಾಮಗಾರಿ ಆರಂಭಿಸಲಾಗುವುದು. ಈ ಮೂಲಕ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲಾಗುವುದು. ದುರಸ್ತಿ ಹೆಸರಲ್ಲಿ ವಾರಕ್ಕೊಮ್ಮೆ ವಿದ್ಯುತ್ ಕಡಿತಗೊಳಿಸುವ ಪ್ರಕ್ರಿಯೆ ಮೆಸ್ಕಾಂನಲ್ಲಿಲ್ಲ, ದುರಸ್ತಿ ಕೆಲಸವಿದ್ದರೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ ಬಳಿಕವಷ್ಟೇ ವಿದ್ಯುತ್ ಕಡಿತಗೊಳಿಸಬೇಕು. ಈ ಬಗ್ಗೆ ಅಧೀಕ್ಷಕ ಅಭಿಯಂತರರಲ್ಲಿ ಅನಮತಿ ಪಡೆಯುವುದು ಅಗತ್ಯವಾಗಿದ್ದರೂ, ಆ ಕೆಲಸ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರದಿಂದ ಸೂಚನೆ ಬಂದ ಹಿನ್ನೆಯೆಲ್ಲಿ ಕಳೆದ ವರ್ಷ 1200 ಸಿಬ್ಬಂದಿ ನೇಮಕ ಮಾಡಲಾಗಿದೆ. ಎಲ್ಲರೂ ಅಂಕಗಳ ಆಧಾರದಲ್ಲಿ ಪ್ರಭಾವಿಗಳ ಪತ್ರ ಬಲದೊಂದಿಗೆ ಕೆಲಸಕ್ಕೆ ಸೇರಿದ್ದರು. ಪ್ರತೀ ಘಟಕಕ್ಕೆ ತಲಾ ಹತ್ತು ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ವರ್ಷದಲ್ಲೇ ಎಲ್ಲರೂ ನಾಪತ್ತೆಯಾಗಿದ್ದು, ನಾಲ್ಕು ಮಂದಿ ಮಾತ್ರವೇ ಉಳ್ಳಾಲ ಘಟಕದಲ್ಲಿ ಉಳಿದಿದ್ದಾರೆ. ಸಿಬ್ಬಂದಿ ಆಯ್ಕೆ ಸಂದರ್ಭ ಸ್ಥಳೀಯರ ಪರಿಗಣನೆ ಅಗತ್ಯ ಎಂದರು.
ನಗರಸಭೆಯ ಸದಸ್ಯ ಬಾಝಿಲ್ ಡಿಸೋಜ, ಉಳ್ಳಾಲ ಮೆಸ್ಕಾಂ ಸಹಾಯಕ ಅಭಿಯಂತರ ದಯಾನಂದ, ರಾಜೇಶ್ ಶೆಟ್ಟಿ, ಪ್ರವೀಣ್, ಕಿರಿಯ ಅಭಿಯಂತರರಾದ ನಿತೇಶ್, ವಿನೋದ್, ಮಂಗಳೂರು ಮೆಸ್ಕಾಂನ ಸಹಾಯಕ ಅಭಿಯಂತರೆ ಮೀನಾ ಶೆಟ್ಟಿ, ಹಿರಿಯ ಲೆಕ್ಕಾಧಿಕಾರಿ ಮೆಲ್ವಿನ್ ಡಿಸೋಜ, ಗುತ್ತಿಗೆದಾರರಾದ ಟಿ.ಎಸ್.ಅಬ್ದುಲ್ಲಾ, ರವಿ ಸುವರ್ಣ, ಬ್ಯಾಝಿಲ್, ಕಿನ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿರಾಜ್ ಕಿನ್ಯ, ಪ್ರಮುಖರಾದ ರವೀಂದ್ರರಾಜ್ ಉಳ್ಳಾಲ್, ಬಾಬು ಶೆಟ್ಟಿ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.



