ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಬಾರ್ಜ್ ಬಹುತೇಕ ಮುಳುಗುವ ಹಂತವನ್ನು ಶನಿವಾರದಂದು ತಲುಪಿದ್ದು, ಪರಿಸರ ಇಲಾಖೆ ತೈಲ ಸೋರಿಕೆ ಮುಂಜಾಗ್ರತಾ ಕ್ರಮವಾಗಿ ಬಾರ್ಜ್ ಗುತ್ತಿಗೆ ಪಡೆದುಕೊಂಡ ಧರ್ತಿ ಕಂಪೆನಿ ವಿರುದ್ಧ ಜಾರಿ ಮಾಡಿದೆ.
ಜೂ.3 ರಂದು ಕಡಲ್ಕೊರೆತ ಕಾಮಗಾರಿ ಮುಗಿಸಿ ವಾಪಸ್ಸು ಮುಂಬೈ ತೆರಳಬೇಕಾಗಿದ್ದ ಬಾರ್ಜ್ ಕಡಲ್ಕೊರೆತ ಶಾಶ್ವತ ತಡೆಗೋಡೆಯಾಗಿ ಹಾಕಲಾಗಿದ್ದ ರೀಫ್ ಮೇಲಿನ ಕಲ್ಲುಗಳಿಗೆ ತಗಲಿ ಹಾನಿಯಾಗಿತ್ತು. ಸಮುದ್ರದಲ್ಲಿ ಮುಂಗಾರಿನ ಹಿನ್ನೆಲೆಯಲ್ಲಿ ಬೀಸಿದ್ದ ಗಾಳಿ ಹಾಗೂ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಘಟನೆ ಸಂಭವಿಸಿತ್ತು. ಪರಿಣಾಮ ಅಪಾಯದಲ್ಲಿ ಸಿಲುಕಿದ್ದ 27 ಮಂದಿ ನೌಕರರನ್ನು ರಕ್ಷಿಸಲಾಯಿತಾದರೂ, ಬಾರ್ಜ್ ಮಾತ್ರ ಮೇಲೆತ್ತಲು ಸಾಧ್ಯವಾಗಲಿಲ್ಲ. ಈ ನಡುವೆ ಬಾರ್ಜ್ ಒಳಗಡೆಯಿದ್ದ ಡಿಸೀಲ್ ಸೋರಿಕೆಯಾಗಿದೆ ಅನ್ನುವ ಮಾಹಿತಿ ಸ್ಥಳೀಯರು ವ್ಯಕ್ತಪಡಿಸಿದ್ದರು.
ಎಚ್ಚೆತ್ತುಕೊಂಡ ಪರಿಸರ ಇಲಾಖೆ : ಘಟನೆ ನಡೆದು ಐದು ದಿನಗಳಾದ ಬಳಿಕ ಜೂ.7 ರಂದು ಪರಿಸರ ಇಲಾಖೆ ಧರ್ತಿ ಕಂಪೆನಿ ವಿರುದ್ಧ ವರದಿ ನೀಡುವಂತೆ ನೋಟೀಸು ಜಾರಿ ಮಾಡಿತ್ತು. ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕರಾದ ರಾಜಶೇಖರ್ ಪುರಾಣಿಕ್ ನೋಟೀಸು ಜಾರಿ ಮಾಡಿದ್ದರು. ಬಳಿಕ ಜಿಲ್ಲಾಡಳಿತ, ಕೋಸ್ಟ್ ಗಾರ್ಡ್, ಪ್ರಾಜೆಕ್ಟ್ ನಿರ್ದೇಶಕರು , ಎಡಿಬಿ ಅಧಿಕಾರಿಗಳ , ಪರಿಸರ ಇಲಾಖೆ ನೇತೃತ್ವದಲ್ಲಿ ಸಭೆಯೂ ನಡೆದಿತ್ತು. ಸಭೆಯಲ್ಲಿ ಬಾರ್ಜ್ ಒಳಗಡೆಯಿರುವ ಸೊತ್ತುಗಳ ಹಾಗೂ ತೈಲದ ಪ್ರಮಾಣವೂ ಪಡೆದುಕೊಳ್ಳಲಾಗಿತ್ತು.
2,400 ಲೀ ಡಿಸೀಲ್ : ಬಾರ್ಜ್ ಒಳಗಡೆ 2,400 ಲೀ ಡಿಸೀಲ್ ಇದ್ದು, ಮುಳುಗಡೆ ಹೊಂದಿದಲ್ಲಿ ಸೋರಿಕೆಯಾಗುವ ಭೀತಿಯಿದೆ. ಈವರೆಗೆ ಸಮುದ್ರದ ನೀರಿನ ಸ್ಯಾಂಪಲ್ ಗಳನ್ನು ಪಡೆದುಕೊಳ್ಳಲಾಗಿದೆ. ಅದರಲ್ಲಿ ತೈಲ ಸೋರಿಕೆ ಕುರಿತ ಯಾವುದೇ ಕುರುಹುಗಳಿಲ್ಲ. ಪ್ರತಿದಿನವೂ ಸಮುದ್ರದ ನೀರಿನ ಸ್ಯಾಂಪಲ್ ಪಡೆದುಕೊಳ್ಳಲಾಗುತ್ತಿದೆ ಎಂದು ಪರಿಸರ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಎರಡನೇ ಬಾರಿ ನೋಟೀಸು : ಬಾರ್ಜ್ ದಡ ಮುಟ್ಟುವ ಕೆಲಸ ಧರ್ತಿ ಕಂಪೆನಿ ಶೀಘ್ರ ನಡೆಸಬೇಕಿದೆ. ತೈಲ ಸೋರಿಕೆಯಾದಲ್ಲಿ ಜಲಚರಗಳ ಸಾವಿಗೆ ಕಾರಣವಾಗಬಹುದು. ಬೇಗನೇ ಡೀಫಿಲ್ ಮಾಡುವಂತೆ ಮತ್ತೊಮ್ಮೆ ನೋಟೀಸು ಜಾರಿಗೊಳಿಸಲಾಗಿತ್ತು. ಇದಕ್ಕೆ ಧರ್ತಿ ಕಂಪೆನಿ ಸ್ಪಂಧಿಸಿ ದೇಶದಲ್ಲೇ ಇರುವ ಉತ್ತಮ ಸಂರಕ್ಷಣೆ (ಸಾಲ್ವೇಜ್ ) ನಡೆಸುವ ಗುಜರಾತ್ ಮೂಲದ ಕಂಪೆನಿಗೆ ಗುತ್ತಿಗೆ ನೀಡಿದೆ.
ಮೂರು ಬಾರಿ ಪ್ರಯತ್ನ : ಭಾರತದಲ್ಲೇ ಒಂದೇ ಉತ್ತಮ ಕಂಪೆನಿ ಅನಿಸಿಕೊಂಡಿರುವ ಗುಜರಾತ್‍ನ ಸ್ಮಿತ್ ಸಾಲ್ವೇಜ್ ತೈಲ ಡೀಫಿಲ್ಲಿಂಗ್ ಕಾರ್ಯಕ್ಕೆ ಮುಂದಾಗಿದೆ. ಆದರೆ ತಂಡ ಮೂರು ಬಾರಿ ಬಾರ್ಜ್ ಸಮೀಪ ಬಂದಿದ್ದರೂ, ಸಮುದ್ರದ ಬಿರುಸಾಗಿರುವುದರಿಂದ ಪರಿಶೀಲನೆ ನಡೆಸಲು ಅಸಾಧ್ಯವಾಗಿತ್ತು. ಟ್ಯಾಂಕ್ ಹಾಗೂ ಮೋಟಾರುಗಳು ಸಂಪೂರ್ಣ ಸಮುದ್ರದಲ್ಲಿ ಮುಳುಗಿರುವುದರಿಂದ ಒಳಗಿರುವ ತೈಲವನ್ನು ಮೇಲಿನಿಂದ ಡೀಫಿಲ್ ಮಾಡಲು ಅಸಾಧ್ಯವಾಗಿದೆ. ಬಾಜ್ ಒಳಗಿನ ಕಂಪಾರ್ಟ್ ಮೆಂಟುಗಳಿಗೆ ತೆರಳಿ ನೀರಿನಡಿ ಪರಿಶೀಲಿಸಿ ಬಳಿಕ ಡೀಫಿಲ್ಲಿಂಗ್ ಮುಂದಾಗಬೇಕಿದೆ. ಆದರೆ ಅಲೆಗಳ ಬಿರುಸಿಗೆ ತಂಡದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ತೈಲ ಸೋರಿಯಾದಲ್ಲಿ ಯೋಜಕದಿಂದ ಕಾರ್ಯಾಚರಣೆ : ಬಾರ್ಜ್ ಸಂಪೂರ್ಣ ಮುಳುಗಡೆ ಹೊಂದಿ ತೈಲ ಸೋರಿಕೆ ಉಂಟಾದಲ್ಲಿ ತೈಲ ದುರಂತ ವಿಪತ್ತು ನಿರ್ವಹಣೆ ಸಂಸ್ಥೆಯಾಗಿರುವ ಮಂಗಳೂರಿನ ಯೋಜಕ ಪ್ರೈವೇಟ್ ಲಿ. ಕಂಪೆನಿಯನ್ನು ನಿಯೋಜಿಸಲಾಗಿದೆ. ಸಮುದ್ರದ ನೀರಿನಲ್ಲಿ ತೈಲ ಮಿಶ್ರಣ ಹೊಂದಿದಲ್ಲಿ ಅದಕ್ಕಾಗಿ ರಾಸಾಯನಿಕ ಸಿಂಪಡಿಸಿ, ಜಲಚರಗಳು ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಾಚರಣೆ ಕೈಗೊಳ್ಳಲಾಗುವುದು ಅನ್ನುವ ಮಾಹಿತಿಯನ್ನು ಪರಿಸರ ಇಲಾಖೆ ನೀಡಿದೆ.





