ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿರುವ ದೇರಳಕಟ್ಟೆಯಲ್ಲಿ ಸುಸಜ್ಜಿತವಾದ ಜಂಕ್ಷನ್ ಡಾಮರೀಕರಣ ಸೇರಿದಂತೆ ಅಗಲೀಕರಣ ನಡೆಸಿದ್ದು, ಮುಂದಿನ ದಿನಗಳಲ್ಲಿ ಜಂಕ್ಷನ್ ಸೌಂದರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ಅವರು ದೇರಳಕಟ್ಟೆಯಲ್ಲಿ ನೂತನವಾಗಿ ಅಭಿವೃದ್ಧಿಗೊಳಿಸಿದ ಜಂಕ್ಷನ್‍ಗೆ ಚಾಲನೆ ನೀಡಿ ಮಾತನಾಡಿದರು.
ದೇರಳಕಟ್ಟೆಯಂತೆ ನಾಟೆಕಲ್ ಜಂಕ್ಷನ್ ಅಭಿವೃದ್ಧಿ ಕಾಮಾಗಾರಿ ಪೂರ್ಣಗೊಂಡಿದೆ. ಈ ವ್ಯಾಪ್ತಿಯಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು ಅಭಿವೃದ್ಧಿಯಾಗುತ್ತಿರುವ ಹಿನ್ನಲೆಯಲ್ಲಿ ಜಂಕ್ಷನ್‍ನಲ್ಲಿ ಜನಸಂಖ್ಯೆ ಸೇರಿದಂತೆ ವಾಹನ ದಟ್ಟಣೆಯಿಂದ ಮುಕ್ತಿ ಸಿಗಲು ಜಂಕ್ಷನ್ ಅಭಿವೃದ್ಧಿ ಅತ್ಯಂತ ಅವಶ್ಯಕವಾಗಿದ್ದು ಈಗಾಗಲೇ ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯ ಡಾಮರೀಕರಣ ಮತ್ತು ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅವರು ದೇರಳಕಟ್ಟೆ ಜಂಕ್ಷನ್ ಸುಂದರವಾಗಿ ಇಡುವಲ್ಲಿ ಸ್ಥಳೀಯ ವ್ಯಾಪಾರಿಗಳ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ. ಅಬ್ದುಲ್ ಸತ್ತಾರ್, ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಜಬ್ಬಾರ್ ಬೋಳಿಯಾರ್, ಉಳ್ಳಾಲ ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪಂಚಾಯತ್ ಸದಸ್ಯರಾದ ಯೂಸುಫ್ ಬಾವ, ಭವಾನಿ, ಹಸೈನಾರ್, ನಝೀಮಾ, ರಝೀಯಾ, ಕಬೀರ್, ಅಬ್ದುಲ್ ರಝಾಕ್, ಅಬ್ದುಲ್ ಎಂ.ಎ., ಯೂತ್ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ., ಕಾಂಗ್ರೆಸ್ ಮುಖಂಡರಾದ ರವಿರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



