ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮುಡಿಪು: ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ಜನಸ್ನೇಹಿಯಾಗಿ ದೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಕೆ.ಎಸ್ ಹೆಗ್ಡೆ ಆಸ್ಪತ್ರೆ ಮುಡಿಪುವಿನಲ್ಲಿ ಘಟಕ ಸ್ಥಾಪಿಸುವುದರ ಮೂಲಕ ಗ್ರಾಮೀಣ ಭಾಗದ ಜನರಿಗೆ ಸೇವೆ ಒದಗಿಸಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಶ್ರೀ ವಿದ್ಯಾಧಿರಾಜ ದತ್ತಿ ಸಂಸ್ಥೆ ಮುಡಿಪು ಹಾಗೂ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಭಾಗಿತ್ವದಲ್ಲಿ ಮುಡಿಪುವಿನ ಗೋಪಾಲಕೃಷ್ಣ ದೇವಸ್ಥಾನದ ಬಳಿ ನೂತನವಾಗಿ ನಿರ್ಮಾಣಗೊಂಡ ಕೆ.ಎಸ್.ಹೆಗಡೆ ಹೊರರೋಗಿಗಳ ಉಪಗ್ರಹ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಡಿಪು ಒಳಪ್ರದೇಶದ ಜನರಿಗೆ ಆಸ್ಪತ್ರೆಗೆ ಹೋಗಲು ಕಷ್ಟಕರವಾದ ಸ್ಥಿತಿಯಿತ್ತು. ಇದೀಗ ಮುಡಿಪು ಭಾಗದ ಜನರ ಸ್ವಾಸ್ಥ್ಯ ನಿರ್ಮಿಸುವಲ್ಲಿ ಹಾಗೂ ಜನಸಾಮಾನ್ಯರಿಗೆ ಪ್ರಯೋಜನವಾಗುವಂತೆ ಆಸ್ಪತ್ರೆ ಘಟಕ ಸ್ಥಾಪನೆಯಾಗಿದೆ. ಇದರ ಸದುಪಯೋಗವನ್ನು ಗ್ರಾಮದ ಜನರು ಪಡೆಯಬಹುದಾಗಿದೆ ಎಂದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಅವರು, ವೈದ್ಯರನ್ನು ಜನರು ದೇವರಂತೆ ಕಾಣುತ್ತಾರೆ ಇದಕ್ಕೆ ಅರ್ಹವಾಗಿ ವೈದ್ಯರು ಕೂಡಾ ಸೇವಾ ನಿಷ್ಠೆಯೊಂದಿಗೆ ಉತ್ತಮವಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಮುನ್ನಡೆದರೆ ಉತ್ತಮ ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ.
ಗ್ರಾಮೀಣ ಪದೇಶವಾದ ಮುಡಿಪುವಿನಲ್ಲಿ ಸಮಾಜ ಸೇವಾ ಮನೋಭಾವನೆಯೊಂದಿಗೆ ನಿರ್ಮಾಣಗೊಂಡ ಕೆ.ಎಸ್.ಹೆಗ್ಡೆ ಹೋರರೋಗಿಗಳ ಉಪಗ್ರಹ ಕೇಂದ್ರವು ರೋಗಿಗಳಿಗೆ ಶ್ರೇಷ್ಠ ಮಟ್ಟದ ಚಿಕಿತ್ಸೆಗಳನ್ನು ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಇಲ್ಲಿರುವ ವೈದ್ಯರು ಜನರೊಂದಿಗೆ ಉತ್ತಮ ಭಾಂಧವ್ಯವನ್ನು ಬೆಳೆಸಿಕೊಳ್ಳುವುದರೊಂದಿಗೆ ಸಂಸ್ಥೆಗೂ ಕೀತಿಗೂ ಕಾರಣಕರ್ತರಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾಧಿರಾಜ ದತ್ತಿ ಸಂಸ್ಥೆಯ ಅಧ್ಯಕ್ಷ ಎಂ.ನರೇಂದ್ರ ಕಾಮತ್ ಅವರು, ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೊಂದಿದ್ದರೆ ನಮ್ಮ ಜೀವನ ಹಸನಾಗುತ್ತದೆ. ಆಸ್ತಿ ಸಂಪತ್ತಿಗಿಂತ ಆರೋಗ್ಯ ಪ್ರಮುಖವಾದುದು. ನಿಟ್ಟೆ ವಿವಿಯ ಸಹಯೋಗದೊಂದಿಗೆ ಮುಡಿಪುವಿನಲ್ಲಿ ಆರಂಭಗೊಂಡ ಈ ಉಪಗ್ರಹ ವಿಭಾಗವು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ, ಉಪಕುಲಪತಿ ಡಾ.ರಮಾನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ವಿದ್ಯಾಧಿರಾಜ ದತ್ತಿ ಸಂಸ್ಥೆಯ ಉಪಾಧ್ಯಕ್ಷ ಡಾ.ಸದಾನಂದ ಕಾಮತ್ ಸ್ವಾಗತಿಸಿ, ಖಚಾಂಚಿ ನಾಗೇಶ್ ಎಲ್.ಕಾಮತ್ ವಂದಿಸಿದರು. ಮುಡಿಪು ಕಾಲೇಜಿನ ಉಪನ್ಯಾಸಕಿ ಡಾ.ಲತಾ ಅಭಯಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.
ಮುಡಿಪುವಿನಲ್ಲಿ ನೂತನವಾಗಿ ಆರಂಭಗೊಂಡ ಕೆ.ಎಸ್.ಹೆಗ್ಡೆ ಹೊರರೋಗಿಗಳ ಉಪಗ್ರಹ ವಿಭಾಗದ ಸುಸಜ್ಜಿತ ಕಟ್ಟಡದಲ್ಲಿ ವೈದ್ಯರ ಕೊಠಡಿ, ಚಿಕಿತ್ಸಾ ಕೊಠಡಿ, ವಿರಾಮದ ಕೋಣೆ, ಮಿನಿ ಲ್ಯಾಬರೋಟರಿ, ಫಾರ್ಮಸಿ, ದಂತಚಿಕಿತ್ಸಾಲಯ ಮುಂತಾದ ವ್ಯವಸ್ಥೆಗಳಿಂದ ಕೂಡಿದೆ.




























































