ಉಳ್ಳಾಲ್ ನ್ಯೂಸ್ ನೆಟ್ವರ್ಕ್
ತೊಕ್ಕೊಟ್ಟು: 80,000 ದಷ್ಟು ಪಿಂಚಣಿದಾರರಿರುವ ಜಿಲ್ಲೆಯ ಮಂಗಳೂರಿನ ಪ್ರಾವಿಡಂಟ್ ಫಂಡ್ ಕಚೇರಿಯಲ್ಲಿ ಕೇವಲ 60 ಮಂದಿ ಸಿಬ್ಬಂದಿ ಮಾತ್ರವಿದ್ದು, ಇದರಿಂದ ಕಾರ್ಮಿಕರ ಪಿಂಚಣಿ ವಿತರಣೆಯೂ ಸಮಗ್ರ ರೀತಿಯಲ್ಲಿ ಆಗುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಅವರು ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ತೊಕ್ಕೊಟ್ಟು ಹೊಸ ಬಸ್ ನಿಲ್ದಾಣದ ಬಳಿ ಮಂಗಳವಾರ ನಡೆದ ಮೇ ದಿನದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
1986ರಲ್ಲಿ ನಡೆದ ಕಾರ್ಮಿಕರ ಚಳವಳಿಯನ್ನು ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ವರ್ಗಗಳು ಮುರಿದಿತ್ತು. ದಬ್ಬಾಳಿಕೆ ಮೂಲಕ ಕಾರ್ಮಿಕ ಸಂಘಟನೆಯ ಮುಖಂಡರುಗಳನ್ನೇ ಬಂಧಿಸಿತ್ತು. ಈ ನಿಟ್ಟಿನಲ್ಲಿ ಆರಂಭವಾದ ಕಾರ್ಮಿಕರ ದಿನಾಚರಣೆ , ಕಾರ್ಮಿಕರ ಹಕ್ಕುಗಳನ್ನು ಪಡೆಯುವಲ್ಲಿ ಶ್ರಮವಹಿಸುವ ದಿನವಾಗಿದೆ. ಜಾಗತೀಕರಣ, ಉದಾರೀಕರಣ, ಖಾಸಗೀರಕಣದ ಜಾರಿಯಿಂದಾಗಿ ಎಲ್ಲಾ ಸರಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಸಲಾಗುತ್ತಿದೆ. ಹಿಂದೆ ಮಂಗಳೂರಿನ ಪ್ರಾವಿಡೆಂಟ್ ಫಂಡ್ ಕಚೇರಿಯಲ್ಲಿದ್ದ 200 ಕ್ಕೂ ಅಧಿಕ ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ. ಇದೀಗ ಕೇವಲ 60 ಮಂದಿ ಮಾತ್ರ 80 ,000 ಪಿಂಚಣಿದಾರರ ಯೋಜನೆಗಳನ್ನು ವಿತರಿಸಬೇಕಾಗಿದೆ.
ಶೇ.90 ರಷ್ಟು ಮಂದಿ ಕಾರ್ಮಿಕರು ಅಸುರಕ್ಷಿತವಾಗಿ ದುಡಿಯುವ ಅನಿವಾರ್ಯತೆ ಇದೆ. ಕಟ್ಟಡ ಕಾರ್ಮಿಕರಿಗಾಗಿ ಇರುವ ಕಲ್ಯಾಣ ಮಂಡಳಿ ಉಪಯೋಗಕ್ಕೆ ಬರುತ್ತಿಲ್ಲ. ಅಲ್ಲಿರುವ ಹಣವನ್ನು ದುರುಪಯೋಗಪಡಿಸಲಾಗುತ್ತಿದೆ. ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ಕೋಮು ದಂಗೆ ಎಬ್ಬಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಯತ್ನಿಸಿದ್ದಾರೆ. ದೇಶದ ಉದ್ದಗಲಕ್ಕೂ ಇಂತಹ ಘಟನೆಗಳನ್ನು ನಡೆಸಿ ಮತ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುನ್ನೂರು ಯುವಕ ಮಂಡಲದ ಗೌರವಾಧ್ಯಕ್ಷ ಹರೀಶ್ ಮುಂಡೋಳಿ, ಭಗವತಿ ಸಹಕಾರಿ ಬ್ಯಾಂಕಿನ ನೌಕರರ ಸಂಘದ ನಿರ್ದೇಶಕ ರಾಘವ್.ಯಸ್.ಉಚ್ಚಿಲ್, ಕಟ್ಟಡ ಕಾರ್ಮಿಕರ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಜನಾರ್ದನ ಕುತ್ತಾರ್, ದಲಿತ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ನಾರಾಯಣ ತಲಪಾಡಿ, ಪಿಂಚಣಿದಾರರ ಸಂಘದ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಸುಂದರ ಕುಂಪಲ, ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಪದ್ಮಾವತಿ. ಯಸ್.ಶೆಟ್ಟಿ, ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಾಬು ಪಿಲಾರ್, ಕಾರ್ಯದರ್ಶಿ ಯು.ಜಯಂತ ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭ ಕಾರ್ಮಿಕರ ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.











