ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೋಟೆಕಾರು : ಎಲ್ಲಾ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವನ್ನು ಶ್ರೀ ಶಂಕರ ಜಯಂತಿ ಉತ್ಸವದ ಮೂಲಕ ಕೈಗೆತ್ತಿಕೊಂಡಿರುವ ಕಾರ್ಯ ಮಹತ್ಕಾರ್ಯವಾಗಿದ್ದು, ಇದು ಶೃಂಗೇರಿ ಮಠದ ಸಂಪರ್ಕವನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸುವ ಮೂಲಕ ಯಶಸ್ವಿಯಾಗಲಿದೆ ಎಂದು ಉಡುಪಿ ಜಿಲ್ಲಾ ಮರಾಠ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯಕ್ ಅಭಿಪ್ರಾಯಪಟ್ಟರು.
ಅವರು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನಂ ಶ್ರೀ ಶೃಂಗೇರಿ ಶಂಕರ ಮಠ ಕೋಟೆಕಾರು ವತಿಯಿಂದ ಕೋಟೆಕಾರು ಮಠದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರ ಜಯಂತಿ ಉತ್ಸವ-2017 ರನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮದ ಸಂರಕ್ಷಣೆಗೆ ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಕಾರ್ಯ ಅಜರಾಮರ. ನಾಶದ ಅಂಚಿನಲ್ಲಿದ್ದ ಸನಾತನ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಅವರದ್ದಾಗಿದೆ. ಭರತಖಂಡದಲ್ಲಿ ಏಕತೆಯನ್ನು ಸ್ಥಾಪಿಸುವಲ್ಲಿಯೂ ಸಫಲರಾದವರು. ಇದೀಗ ಅವರ ಜಯಂತಿ ಉತ್ಸವದ ಸಂದರ್ಭ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ಮಹತ್ತರವಾದದ್ದು ಎಂದರು.
ವಿಶೇಷ ಉಪನ್ಯಾಸಗೈದ ಕೇಂದ್ರೀಯ ವಿದ್ಯಾಲಯದ ಈಶ್ವರ್ ಭಟ್ ಇವರು ಮಾತನಾಡಿ ಜಯಂತಿ ಆಚರಿಸುವುದೆಂದಾದಲ್ಲಿ ಜಯಂತಿ ಆಚರಿಸುವವರ ತತ್ವಾದರ್ಶಗಳನ್ನು ಅರಿಯುವುದರ ಮೂಲಕ ಆಚರಣೆ ಅರ್ಥಪೂರ್ಣವಾಗುತ್ತದೆ. ವೇದದ ಶಬ್ದಾರ್ಥಗಳನ್ನು ಮಥನ ಮಾಡಿ ಅದರಿಂದ ವೇದಾಂತ ವಿದ್ಯೆಯನ್ನು ಕಲಿಸಿಕೊಟ್ಟವರು ಶ್ರೀ ಶಂಕರ ಭಗವತ್ಪಾದಾಚಾರ್ಯರು. 12 ಶತಮಾನಗಳ ಹಿಂದೆ ಶಂಕರ ಸಿದ್ಧಾಂತ, ಅದ್ವೈತ ವೇದಾಂತ ಆರಂಭವಾಗಿ ಪ್ರತ್ಯೇಕವಾದ ಜ್ಞಾನ ರಾಶಿಯಾಗಿ ಬೆಳೆದುನಿಂತಿದೆ. ಭಾರತೀಯರ ಜೀವನ ಕ್ರಮ ನೆಲೆನಿಂತಿರುವುದು ವೇದಗಳ ಮೇಲೆ. ಕಾಲಕ್ರಮೇಣ ವೈದಿಕ ಶಬ್ದ ಅರ್ಥ ಸಂಕೋಚಗೊಂಡು ಸಮಾಜದ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ವೈದಿಕ ಒಂದು ವರ್ಣ, ವರ್ಗದ ಆಸ್ತಿಯಲ್ಲ, ಸಮಸ್ತರಿಗೆ ಸಂಬಂಧಿಸಿದ್ದಾಗಿದೆ.
ಜೈನ, ಬೌದ್ಧ ಧರ್ಮ ಬೆಳೆಯುವ ಸಲುವಾಗಿ ವೇದಗಳನ್ನು ವಿರೋಧಿಗಳು ಖಂಡಿಸಬೇಕಾಯಿತು. ಎಲ್ಲರಿಗೂ ಸಲ್ಲುವ ವೇದವನ್ನು ಪ್ರತಿಪಾದಿಸಿದ ಶ್ರೀ ಶಂಕರರ ಜಯಂತಿ ಉತ್ಸವ ಸಾರ್ವತ್ರಿಕ, ಸಾರ್ವಜನಿಕವಾಗಿ ಆಚರಿಸಬೇಕಾಗಿದೆ. ಸರಕಾರ ಈ ಹಿಂದೆಯೇ ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿಯ ದಿನವನ್ನು ತತ್ವಶಾಸ್ತ್ರಜ್ಞರ ದಿನ ಎಂದು ಘೋಷಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್ ವಾಸುದೇವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದಯವಾಣಿಯ ನಿವೃತ್ತ ಹಿರಿಯ ಉಪಸಂಪಾದಕ ನಿತ್ಯಾನಂದ ಪಡ್ರೆ, ಕಾಸರಗೋಡಿನ ಆರ್ಯ ಯಾನೆ ಮರಾಠ ಸಮಾಜದ ಮಾಜಿ ಅಧ್ಯಕ್ಷ ಸಂಜೀವ ರಾವ್ ಸಿಂಧಿಯಾ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪಿ.ಕೃಷ್ಣ ಗಟ್ಟಿ ಸೋಮೇಶ್ವರ, ಕಾಸರಗೋಡು ಜಿಲ್ಲಾ ರಾಮ ರಾಜ ಕ್ಷತ್ರಿಯ ಯಾನೆ ಕೋಟೆಕಾರ್ ಸಂಘದ ಅಧ್ಯಕ್ಷ ವೆಂಕಟರಮಣ ಬಿ.ಪಿ ಉಪಸ್ಥಿತರಿದ್ದರು.
ಶ್ರೀ ಶಂಕರ ಸೇವಾ ಪ್ರತಿಷ್ಠಾನ ಇದರ ಅಧ್ಯಕ್ಷ ಸತ್ಯಶಂಕರ ಬೊಳ್ಳಾವ ಸ್ವಾಗತಿಸಿದರು. ಸಾಯಿನಾಥ ಮಲ್ಲಿಗೆಮಾಡು ವಂದಿಸಿದರು.
ಈ ವೇಳೆ ಅನುಷ ಇವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಿತು.







