ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ಬದುಕಿನಲ್ಲಿ ಸುಖ, ಕಷ್ಟ, ನಷ್ಟಗಳು ಸಾಮಾನ್ಯ. ಆದರೆ ಅದನ್ನು ಬಂಡೆಗಲ್ಲಿನಂತೆ ಗಟ್ಟಿಯಾಗಿ ಎದುರಿಸಿ ಮುನ್ನಡೆಯುವುದೇ ಜೀವನ. ಬದುಕಿನಲ್ಲಿ ಯಾವತ್ತೂ ನಾವು ಸುಖವನ್ನು ಮಾತ್ರ ಬಯಸದೆ ವಿದ್ಯಾವಂತರಾಗುವುದರೊಂದಿಗೆ ಉತ್ತಮ ಜೀವನವನ್ನು ಕಂಡುಕೊಳ್ಳಲು ಪರರ ದುಃಖಗಳಿಗೂ ಸ್ಪಂದಿಸುವುದರೊಂದಿಗೆ ಮುನ್ನಡೆಯಬೇಕು ಎಂದು ಯಕ್ಷಗಾನದ ಹಾಸ್ಯ ಕಲಾವಿದ ಹಾಗೂ ಯಕ್ಷರಂಗದ ಚಾರ್ಲಿ ಚಾಪ್ಲಿನ್ ಖ್ಯಾತಿಯ ಸೀತರಾಮ ಕುಮಾರ್ ಕಟೀಲ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ನಡೆದ ಮೂರು ದಿನಗಳ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದು ವಿದ್ಯಾರ್ಥಿಗಳಿಗೆ ಕಲಿಯಲು ಸಾಕಷ್ಟು ಅವಕಾಶಗಳಿವೆ, ಹೆತ್ತವರ ಪ್ರೋತ್ಸಾಹ ಸರ್ಕಾರದ ಅನುದಾನವೂ ಸಿಗುತ್ತದೆ. ಆದರೆ ತಾನು ಬಡ ಕುಟುಂಬದಲ್ಲಿ ಹುಟ್ಟಿದ್ದು ನಾಲ್ಕನೇ ತರಗತಿ ಮಾತ್ರ ಕಲಿಯಲು ಸಾಧ್ಯವಾಯಿತು. ಆ ಸಂದರ್ಭ ಟೀಚರ್ ಕೊಟ್ಟ ಚಡ್ಡಿ ತೊಟ್ಟು ಶಾಲೆಗೆ ಹೋಗುತ್ತಿದ್ದೆ, ಹಿಂದಿನ ಭಾಗ ಹರಿದರೂ ಕೈಇಟ್ಟುಕೊಂಡು ಹೋಗುತ್ತಿದ್ದೆ. ಜೀವನ ಸಾಗಿಸಲು ಕಷ್ಟ ಆದಾಗ ಎಂಟನೇ ವಯಸ್ಸಿನಲ್ಲಿ ತಂದೆ ಹೋಟೆಲ್ ಕೆಲಸಕ್ಕೆ ಸೇರಿಸಿದರು.
ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ ಸಮಯ ಬಂದಾಗ ಸಾಯಲೇ ಬೇಕು. ಸತ್ತ ಮೇಲೆ ಖಾಲಿ ಹೋಗುತ್ತಾರೆ. ಲಕ್ಷಗಟ್ಟಲೆ ಖರ್ಚು ಮಾಡಿ ಖರೀದಿಸುವ ಬೆಡ್ಡ್ ಮೇಲೆ ಮಲಗುವ ನಾವು ಸತ್ತಾಗ ಕಟ್ಟಿಗೆ ಮೇಲೆ ಮಲಗುತ್ತೇವೆ. ಐಶಾರಾಮಿ ಮನೆ, ಬಂಗಲೆ, ಹಣ, ಚಿನ್ನಾಭರಣ ಶೇಖರಿಸಿಡಲು ಏನೂ ಇರುವುದಿಲ್ಲ. ನಮ್ಮ ಹೆಣಕ್ಕೆ ಸುತ್ತುವ ಬಿಳಿ ಬಟ್ಟೆಯಲ್ಲಿ ಹಣ ಸಂಗ್ರಹಿಸಿಡಲು ಜೇಬು ಇರುವುದಿಲ್ಲ. ಲೋಕವನ್ನೇ ಗೆದ್ದ ಅಲೆಗ್ಸಾಂಡರ್ ಅವರೂ ಇದನ್ನು ಬರೆದಿಟ್ಟು ಜನರಿಗೆ ಮನವರಿಕೆ ಮಾಡಿದ್ದರು. ಇದನ್ನಾದರೂ ನೆನಪಿನಲ್ಲಿಟ್ಟುಕೊಂಡು ಯಾರೂ ಸುಖದ ಹಿಂದೆ ಬೀಳದೆ ಜೀವನದ ಎಲ್ಲಾ ಮಗ್ಗುಲುಗಳನ್ನು ಅರಿತು ಮುನ್ನಡೆಯಬೇಕು ಎಂದರು.
ನಿಮಗೆ ಅವಕಾಶ ಇದ್ದರೆ ರಾಜ್ಯದಲ್ಲಿ ಅದೆಷ್ಟೋ ಬಡ ಮಕ್ಕಳಿದ್ದು ಅವರ ಶಿಕ್ಷಣಕ್ಕೆ ನೆರವಾಗಿ. ತಾನು ದುಡಿದು ಸಿಕ್ಕಿದ ಹೆಚ್ಚುವರಿ ಸಂಭಾವನೆಯಲ್ಲಿ ವರ್ಷಕ್ಕೆ 800-900 ಅನಾಥಾಶ್ರಮದ ಮಕ್ಕಳಿಗೆ ಊಟ ನೀಡುತ್ತಿದ್ದೇನೆ. ತಂದೆ-ತಾಯಿಯನ್ನು ಸಾಕುವ ಭಾಗ್ಯ ಇಲ್ಲದ ನಾನು ಇಬ್ಬರು ವೃದ್ಧರನ್ನು ಸಾಕುತ್ತಿದ್ದೇನೆ. ನಾಲ್ಕು ಮಕ್ಕಳಿಗೆ ಸ್ಕಾಲರ್‍ಶಿಪ್ ನೀಡುತ್ತಿದ್ದೇನೆ. ಇಂದು ನನಗೆ ಊಟವಿದೆ, ಅಭಿಮಾನಿಗಳು ಕೊಟ್ಟ ಸಾಕಷ್ಟು ಬಟ್ಟೆಗಳಿವೆ. ಆದರೆ ಬಟ್ಟೆ ತೊಡಲು ಅವಕಾಶ ಸಿಗುತ್ತಿಲ್ಲ, ಕೆಲಸ ಒತ್ತಡದಿಂದ ನೀರು ಸೇವನೆಯೇ ಹೆಚ್ಚಾಗಿದ್ದು ಆರೋಗ್ಯವೂ ಹದಗೆಡಲು ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸೀತಾರಮ್ ಕುಮಾರ್ ಕಟೀಲ್ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು.
ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷ ಶ್ಯಾಮಪ್ರಸಾದ್, ವೀರೇಂದ್ರ ಮೊಗವೀರ, ಸುಕ್ಷಿತಾ ರಾವ್ ಬಿ, ಅಶೋಕ್ ಆರ್. ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ನಿರ್ದೇಶಕ ಪ್ರೊ. ಬಾರ್ಕೂರು ಉದಯ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಪದಾಧಿಕಾರಿಗಳಾದ ಸುನೀಲ್ ಕೆ.ಎಂ ವರದಿ ಓದಿದರು. ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕøತಿಕ ಸ್ಪರ್ಧೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಸಮಗ್ರ ಪ್ರಶಸ್ತಿ ಪಡೆದರೆ, ಇಂಡಸ್ಟ್ರಿಯಲ್ ಕೆಮೆಸ್ಟ್ರಿ ಮತ್ತು ಬಯೋಕೆಮಿಸ್ಟ್ರಿ ದ್ವಿತೀಯ ಹಾಗೂ ಫಿಸಿಕ್ಸ್ ವಿಭಾಗದ ತೃತೀಯ ಸ್ಥಾನ ಪಡೆಯಿತು.
ಸಾವಿರಾರು ಜನರನ್ನು ನಕ್ಕುನಗಿಸುವ ಸೀತಾರಾಮ್ ಕಟೀಲ್ ಕಣ್ಣೀರಿಟ್ಟಾಗ…!
ಹಾಸ್ಯ ದಿಗ್ಗಜ ಸೀತಾರಾಮ್ ಕಟೀಲ್ ಅವರು ವೇದಿಕೆಯಲ್ಲಿ ತಮ್ಮ ಹಾಸ್ಯದ ಮೂಲಕ ಅದೆಷ್ಟೋ ಸಾವಿರ ಜನರನ್ನು ನಕ್ಕು ನಗಿಸುತ್ತಾರೆ. ಆದರೆ ಗುರುವಾರ ಮಂಗಳೂರು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತನ್ನ ಜೀವನದ ಸಂಕಷ್ಟಗಳನ್ನು ನೆನೆದು ಕಣ್ಣೀರಿಟ್ಟರು. ನಾಲ್ಕನೇ ತರಗತಿ ಕಲಿತಿರುವ ನನಗೆ ವಿಶ್ವವಿದ್ಯಾನಿಲಯವು ಸನ್ಮಾನಿಸಿರುವುದು ರಾಜ್ಯಪ್ರಶಸ್ತಿಗಿಂತಲೂ ದೊಡ್ಡ ಸನ್ಮಾನ ಎಂದರು. ಅಲ್ಲದೆ ತನ್ನ ಜೀವನದ ಏಳು ಬೀಳುಗಳನ್ನು ಬಿಚ್ಚಿಟ್ಟ ಅವರು ವಿದ್ಯಾರ್ಥಿಗಳಲ್ಲಿ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಬಂಡೆಗಲ್ಲಿನಂತೆ ಸವಾಲಾಗಿ ಸ್ವೀಕರಿಸಿ ತಂದೆ ತಾಯಿಗಳ ಋಣವನ್ನು ತೀರಿಸುವುದರೊಂದಿಗೆ ಬಡವರ ನೋವಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.



