ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಸಂತ ಜೋಸೆಫ್ ಜೋಯ್ಲ್ಯಾಂಡ್ ಶಾಲೆ, ಸೋಮೇಶ್ವರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಸ್ಥಳೀಯ ಸಂಸ್ಥೆ ಹಾಗೂ ಜೆಸಿಐ ಮಂಗಳಗಂಗೋತ್ರಿ ಜಂಟಿಯಾಗಿ ಮಂಗಳೂರು ತಾಲೂಕು ಮಟ್ಟದ ಎರಡು ದಿನಗಳ ರಾಜ್ಯ ಹಾಗೂ ರಾಷ್ಟ್ರಪತಿ ಪುರಸ್ಕಾರದಲ್ಲಿ ಭಾಗವಹಿಸಲು ಸಿದ್ಧತೆಗಾಗಿ ತರಬೇತಿ (ದಳ ರಾತ್ರಿ ತಂಗುವ ಶಿಬಿರ ಮತ್ತು ದಳ ರಾತ್ರಿ ಹೊರ ಸಂಚಾರ ಕಾರ್ಯಕ್ರಮ) ಶಿಬಿರ ಮಂಗಳವಾರ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪ್ರಶಾಂತ ನಾಯ್ಕ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಭಾರತದಲ್ಲಿ 1909 ರಲ್ಲಿ ಪ್ರಾರಂಭವಾದ ಸ್ಕೌಟ್ ಚಳುವಳಿಗೆ ಶತಮಾನದ ಇತಿಹಾಸವಿದೆ. ಯುವ ಜನತೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧಿ ಹೊಂದಲು ಸ್ಕೌಟ್ ಒಂದು ಉತ್ತಮ ವೇದಿಕೆಯಾಗಿದ್ದು, ದೇಶ ಸೇವೆಯಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಮಾತ್ರವಲ್ಲ ಜೀವನದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಧೈರ್ಯ ಮತ್ತು ಜಾಣ್ಮೆಯಿಂದ ಎದುರಿಸುವ ಕೌಶಲ್ಯವನ್ನೂ ಸ್ಕೌಟ್ ಗೈಡ್ಸ್ ಕಲಿಸಿಕೊಡುತ್ತದೆ ಎಂದರು.
ಜಗತ್ತಿದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಜಗದ್ವಿಖ್ಯಾತರಾದ ಅನೇಕ ಮಹಾನ್ ವ್ಯಕ್ತಿಗಳ ಸಾಧನೆಯ ಹಿಂದೆ ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್, ಗೈಡ್ನಿಂದ ಪಡೆದ ತರಬೇತಿ ಮತ್ತು ಸ್ಪೂರ್ತಿಯ ಪ್ರಭಾವ ಎಂದು ಅವರು ತಮ್ಮ ಜೀವನಚರಿತ್ರೆಯಲ್ಲಿ ದಾಖಲಿಸಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಉನ್ನತ ಭವಿಷ್ಯಗಳನ್ನು ರೂಪಿಸಿಕೊಳ್ಳುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಅತ್ಯುತ್ತಮವಾದ ವೇದಿಕೆಯಾಗಿದೆ” ಎಂದು ಹೇಳಿದರು. ಒಬ್ಬ ಸ್ಕೌಟ್ಗೆ ಶಿಸ್ತು, ಸಂಯಮ, ನಿಷ್ಠೆ, ಸ್ನೇಹಪರತೆ, ವಿನಯಶೀಲತೆ, ಪರಿಸರ ಸಂರಕ್ಷಣೆ, ಸಾರ್ವಜನಿಕ ಅಸ್ತಿ ರಕ್ಷಣೆ, ಧೈರ್ಯಶಾಲಿ, ಪ್ರೌಢಿಮೆ ಹಾಗೂ ಕಾಯ, ವಾಚ, ಮನಸಾ ಶುದ್ಧತೆಯಿಂದ ಬದುಕುವುದನ್ನು ಕಲಿಸಿಕೊಡುತ್ತದೆ. ಈ ನಿಯಮಗಳು ಸ್ಕೌಟ್-ಗೈಡ್ಸ್ಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅನುಕರಣೀಯ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ದಳಕ್ಕೆ ಸೇರಿ ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವೂದರ ಜೊತೆಗೆ, ದೇಶ ಸೇವೆ, ಸಮಾಜ ಸೇವೆ ಮತ್ತು ಪ್ರಕೃತಿ ಸೇವೆಗಳನ್ನು ಮಾಡುತ್ತಾ ಮಾದರಿ ಪ್ರಜೆಯಾಗಿ ಮೂಡಿಬರಬೇಕು ಎಂದು ಹೇಳಿದರು.
ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಎನ್.ಜಿ.ಮೋಹನ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇವದಾಸ ಕೊಲ್ಯ, ಜೇಸಿ ರತ್ನಕುಮಾರ್, ಸ್ಕೌಟ್ ಗೈಡ್ಸ್ ಆಯುಕ್ತರಾದ ರಾಮಶೆಷ ಶೆಟ್ಟಿ, ಲವೀನಾ ಪಿಂಟೊ, ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ವೀಣಾ ಭಟ್, ಕೃಷ್ಣ ಗಟ್ಟಿ, ಗೈಡ್ಸ್ ಕ್ಯಾಪ್ಟನ್ಗಳಾದ ಸುಫಲಾ, ಫ್ಲೇವಿ ಡಿಸೋಜ, ಭಾಸ್ಕರ ಉಪಸ್ಥಿತರಿದ್ದರು.
ಸ್ಕೌಟ್ ಮಾಸ್ಟರ್ ಪ್ರವೀಣ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಶಿಬಿರದ ಸಂಚಾಲಕರಾದ ತ್ಯಾಗಂ ಎಮ್. ಹರೇಕಳ ಇವರು ಶಿಬಿರದ ಮುನ್ನೋಟವನ್ನು ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಮಂಗಳೂರು ತಾಲೂಕಿನ ವಿವಿಧ ಶಾಲೆಗಳ ಸುಮಾರು 60 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.


