ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ: ` ನನ ಅರೆ ಮರ್ಲೆ ಪಂಡ್‍ದ್ ಲೆಪ್ಪೊಡ್ಚಿ ಮಾರ್ರೆ’ ತಾತ್ಪರ್ಯವೆಂದರೆ ಅರೆಹುಚ್ಚನೆಂದು ಕರೆಯಬೇಡಿ ಎಂದು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡವರು ತುಳು ಚಿತ್ರರಂಗದ ಅಭಿನಯ ಚಕ್ರವರ್ತಿ ಅರ್ಜುನ್ ಕಾಪಿಕಾಡ್ .
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಇದರ ಆಶ್ರಯದಲ್ಲಿ ವಿವಿ ಕ್ಯಾಂಪಸ್ಸಿನ ಮಂಗಳ ಸಭಾಂಗಣದಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳ ` ಸಂಭ್ರಮ -2017 ‘ ಕ್ಕೆ ಮಂಗಳವಾರ ಚಾಲನೆಯನ್ನು ನೀಡಿದರು.
ರಂಗ್ ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಹುಲಿ ಎಂದು ಕರೆಯುತ್ತಿದ್ದವರು ನಂತರ ಚಂಡಿಕೋರಿ ಚಿತ್ರದ ಸಂದರ್ಭದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಸಹ `ಕೋರಿ’ ಎಂದೇ ಕರೆಯುತ್ತಿದ್ದರು. ಅಷ್ಟಾಗಿ ಸದ್ಯದಲ್ಲೇ ಹೊಸ ಚಿತ್ರ ಅರೆ ಮರ್ಲೆ ಬಿಡುಗಡೆಯಾಗುತ್ತಿದ್ದು, ಮುಂದೆ ನನ್ನನ್ನು ` ಅರೆ ಮರ್ಲೆ’ ಎಂದು ಕರೆಯದಿರಿ ಎಂದು ಹಾಸ್ಯದ ಮಾತುಗಳಿಂದಲೇ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು.
ಅಪ್ಪ ದೇವದಾಸ್ ಕಾಪಿಕಾಡ್ ಪ್ರೋತ್ಸಾಹ ಮತ್ತು ತನ್ನ ಕಠಿಣ ಪರಿಶ್ರಮ ಹಾಗೂ ಚಿತ್ರರಂಗದ ಮೇಲಿರುವ ಪ್ರೀತಿಯಿಂದ ತುಳುನಾಡು ತನ್ನನ್ನು ಯಶಸ್ವಿ ನಟನೆಂದು ತೋರಿಸಿಕೊಟ್ಟಿತು. ಎಲ್ಲರಂತೆ ಆಡಿಷನ್‍ಗೆ ತೆರಳಿದ್ದೆ. ಮುಂಬೈನಲ್ಲಿ ಫೈಟ್ ತರಬೇತಿಗಾಗಿ ದಿನದಲ್ಲಿ 9 ವ್ಯಯಿಸುತ್ತಿದ್ದೆ. ಇದರೊಂದಿಗೆ ನಟನೆ ಸಂದರ್ಭ ತಂದೆಯಿಂದ ಸರಿಯಾದ ಬೈಗುಳವನ್ನು ಕೇಳಿದ್ದೇನೆ. ಈ ಎಲ್ಲಾ ಪರಿಶ್ರಮ ಇಂದು ಚಿತ್ರರಂಗದ ನನ್ನ ಈ ಸಾಧನೆಗೆ ಸಹಾಯವಾಗಿದೆ ಎಂದರು.
ತಮಿಳು ಮಲಯಾಳಿ ಸಿನಿಮಾಗಳ ವೀಕ್ಷಣೆಗೆ ಆ ಭಾಷಿಗರು ಎಷ್ಟು ಬೆಲೆ ಕೊಡುತ್ತಾರೋ ಹಾಗೆಯೇ ತುಳುವರು ಕೂಡಾ ತುಳು ಸಿನಿಮಾವನ್ನು ನೋಡಿ ಅದನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ತುಳುಚಿತ್ರರಂಗಕ್ಕೆ ಬರುವವರಿಗೆ ಇಲ್ಲಿ ಹೆಚ್ಚಿನ ಅವಕಾಶವಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ ಬೈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ . ಲೋಕೇಶ್, ಅಧ್ಯಕ್ಷ ದಿವಾಕರ್ ಶೆಟ್ಟಿ, ಉಪಾಧ್ಯಕ್ಷ ಶ್ಯಾಮಪ್ರಸಾದ್, ಪದಾಧಿಕಾರಿಗಳಾದ ಸುನೀಲ್ ಕೆ.ಎಂ, ವೀರೇಂದ್ರ ಮೊಗವೀರ, ಸುಕ್ಷಿತಾ ರಾವ್.ಬಿ, ಅಶೋಕ್. ಆರ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ. ಬಾರ್ಕೂರು ಉದಯ ಅವರು ಸ್ವಾಗತಿಸಿದರು. ಮಂಗಳೂರು ವಿವಿ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಶ್ಯಾಂ ಪ್ರಸಾದ್ ವಂದಿಸಿದರು.


