ಉಳ್ಳಾಲ: ತುಳುನಾಡಿನ ಪ್ರಾದೇಶಿಕ ಹಿತ ಕಾಪಾಡುವ ಉದ್ದೇಶದಿಂದ ಆರಂಭವಾಗಿರುವ ತುಳುನಾಡು ರಕ್ಷಣಾ ವೇದಿಕೆ , ಇಲ್ಲಿನ ನೆಲ, ಜಲ, ಸಂಪ್ರದಾಯ ಉಳಿಸುವ ಸಲುವಾಗಿ ಸತತವಾಗಿ ಹೋರಾಡುತ್ತಾ ಬಂದಿದೆ ಎಂದು ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ.
ಅವರು ತುಳುನಾಡ ರಕ್ಷಣಾ ವೇದಿಕೆಯ ಮುನ್ನೂರು ಗ್ರಾಮ ಘಟಕದ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಕುತ್ತಾರು ಜಂಕ್ಷನ್ನಿನಲ್ಲಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಕೇರಳ-ಕರ್ನಾಟಕ ಇಬ್ಭಾಗವಾದ ಬಳಿಕ ತುಳುನಾಡಿನ ಮರ್ಯಾದೆಗಳಿಗೆ ಧಕ್ಕೆಯನ್ನು ತರುವಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ರಾಜಕೀಯ ಸಹಕಾರವಿಲ್ಲದೆ ತುಳುನಾಡು ಪ್ರತಿ ವಿಚಾರದಲ್ಲಿ ಕ್ಷೀಣಿಸಿದೆ. ಜಲ್ಲಿಕಟ್ಟು ವಿಚಾರದಲ್ಲಿ ತಮಿಳಿಗರಿಗೆ ಸಿಕ್ಕ ರಾಷ್ಟ್ರಪತಿ ಅಂಗಿತ, ಇನ್ನೂ ಕಂಬಳ ಕ್ರೀಡೆಗೆ ಸಿಕ್ಕಿಲ್ಲ. ಕೃಷಿ ಭೂಮಿ ಬೃಹತ್ ಕೈಗಾರಿಕೋದ್ಯಮಿಗಳ ಪಾಲಾಗುತ್ತಿದ್ದಂತೆ, ನಾಗಾರಾಧನೆ, ಭೂತಾರಾಧನೆಗೂ ಸ್ಥಳವಿಲ್ಲದಂತಾಗುತ್ತಿದೆ. ತುಳುನಾಡಿನ ಜನತೆ ಎಚ್ಚೆತ್ತು ಹೋರಾಟಗಳನ್ನು ನಡೆಸದೇ ಇದ್ದಲ್ಲಿ ನೆಲ, ಜಲವ, ಸಂಪ್ರದಾಯವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಣಿಪುರ ರಿಷಿವನದ ಸಹಾಯಕ ನಿರ್ದೇಶಕ ಪ್ರದೀಪ್ ಪಿಂಟೋ ಒ.ಸಿ.ಡಿ ಮಾತನಾಡಿ ಪರಸ್ಪರ ಜೀವಿಸಿ, ಸಂತೃಪ್ತಿಗೊಳಿಸಿ, ಸತ್ಯಶೋಧಕಾರಿ, ಸತ್ಯದರ್ಶಕರಾಗಿ ಜೀವಿತ ವಸ್ತುಗಳನ್ನು ನೋಯಿಸಿದ ರೀತಿಯಲ್ಲಿ ಬಾಳಬೇಕಿದೆ ಎಂದರು.
ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಿರಾಜ್ ಅಡ್ಕರೆ ಅಧ್ಯಕ್ಷತೆ ವಹಿಸಿದ್ದರು.
ತು.ರ.ವೇ ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ರಶೀದ್ ಜೆಪ್ಪು, ಜೆ.ಇಬ್ರಾಹಿಂ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್, ಉಡುಪಿ ಜಿಲ್ಲಾ ಸಂಚಾಲಕಿ ರಮೇಶ್ ಪೂಜಾರಿ ಶಿರೂರು, ಆನಂದ ಅಮೀನ್ ಅಡ್ಯಾರ್, ಹರೀಶ್ ಶೆಟ್ಟಿ ಶಕ್ತಿನಗರ, ರಕ್ಷಿತ್ ಕೆ.ಬಂಗೇರ, ರಹೀಂ ಕುತ್ತಾರ್, ವಿದ್ಯಾ.ಯು.ಜೋಗಿ, ಅರುಣ್ ಡಿಸೋಜ ಅಸೈಗೋಳಿ, ರಾಜು ಮಾಸ್ಟರ್, ಕೋಟೆಕಾರು ಪಟ್ಟಣ ಪಂಚಾಯತ್ ಘಟಕದ ಅಧ್ಯಕ್ಷ ರವಿ ಶೆಟ್ಟಿ ಮಾಡೂರು, ಲಿಯೋ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ಗಂಗಾಧರ್ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ರಾಜೇಶ್ ಕುತ್ತಾರ್ ವಂದಿಸಿದರು.



























