ಉಳ್ಳಾಲ ನ್ಯೂಸ್ ನೆಟ್ವರ್ಕ್
ಮುಡಿಪು: ಎದೆಗೆ ಗುಂಡು ಬಿದ್ದರೂ ಹೆದರದೇ ಮುಂದಿರುವ ಶತ್ರುವನ್ನು ಮುಗಿಸುವ ಧೈರ್ಯವನ್ನು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ತೆರಳುವ ಯುವ ಜನಾಂಗಕ್ಕೆ ಸ್ಪೂರ್ತಿ ನೀಡಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನ ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ದೇಶಕ್ಕಾಗಿ ಜಮ್ಮು ಕಾಶ್ಮೀರದ ಪಾಂಪೋರ್ ಬಳಿ ಭಯೋತ್ಪಾದಕರೊಂದಿಗೆ ಪರಸ್ಪರ ಹೋರಾಟ ನಡೆಸುತ್ತಿದ್ದ ಸಂದರ್ಭ ಐದು ಗುಂಡು ತಗುಲಿ ಸುಮಾರು ಐದೂವರೆ ತಿಂಗಳ ಕೋಮದಲ್ಲಿ ಇದ್ದು ಬಳಿಕ ಚೇತರಿಸಿಕೊಂಡು ತನ್ನ ತವರೂರಾದ ಮುಡಿಪಿಗೆ ಆಗಮಿಸಿರುವ ವೀರಯೋಧ ಸಂತೋಷ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದರು.
ದೇಶ ಕಟ್ಟುವ ಕಾರ್ಯದೊಂದಿಗೆ ದೇಶ ಸಂರಕ್ಷಣೆಯ ಕಾರ್ಯ ಮಹತ್ವದ್ದಾಗಿದ್ದು, ದೇಶಕ್ಕಾಗಿ ಸೈನಿಕರು ಗಡಿ ಭಾಗದಲ್ಲಿ ಸಂಪೂರ್ಣ ಅರ್ಪಣಾ ಭಾವದಿಂದ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು ದೇಶ ಸೇವೆಗೆ ತೊಡಗಿಸಿಕೊಳ್ಳಲು ಸಂತೋಷ್ ಅವರ ತಾಯಿ ಮತ್ತು ಪತ್ನಿಯ ತ್ಯಾಗ ಮನೋಭಾವನೆಯಿಂದ ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭ ಯೋಧನನ್ನು ಸನ್ಮಾನಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಭಯೋತ್ಪಾದಕರೊಂದಿಗೆ ಜೀವದ ಹಂಗು ತೊರೆದು ಹೋರಾಟ ಮಾಡಿ ಶತ್ರುಗಳನ್ನು ಸದೆ ಬಡಿದು ಗಂಭೀರ ಗಾಯಗೊಂಡು ಈಗ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಅವರು ರಾಷ್ಟ್ರ, ರಾಜ್ಯದೊಂದಿಗೆ ನಮ್ಮ ಜಿಲ್ಲೆಗೆ ಹೆಮ್ಮೆ ತರುವ ಕಾರ್ಯವನ್ನು ಮಾಡಿದ್ದು, ಗುಣಮುಖರಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶ ಸೇವೆಗೆ ಸಮಯ ನೀಡುವಂತಾಗಲಿ ಎಂದರು.
ಈ ಸಂದರ್ಭ ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರನಾಥ ಕೊಟ್ಟಾರಿ, ಮಂಗಳೂರು ಗುರುದೇವಾ ಸೇವಾ ಬಳಗದ ಅದ್ಯಕ್ಷ ಜಯಂತ್ ಜೆ. ಕೋಟ್ಯಾನ್, ಚಂದ್ರಶೇಖರ್, ವೇಣುಗೋಪಾಲ ಮಾರ್ಲ, ವಾಸುದೇವ ಆರ್. ಕೊಟ್ಟಾರಿ, ಪುಣ್ಯ ಕೋಟಿ ನಗರದ ಶಾರದಾ ಗಣಪತಿ ಶಾಲೆ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ , ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾಜಾ ಹೇಮನಾಥ್, ಉಪಾಧ್ಯಕ್ಷ ನಿತಿನ್ ಗಟ್ಟಿ ಕುರ್ನಾಡು, ಸದಸ್ಯರಾದ ಗೋಪಾಲ್ ಕುಲಾಲ್, ಶಿವಶಂಕರ ಭಟ್ .ರೋಹಿತ್ ಗಟ್ಟಿ ಡಾ| ಮುನೀರ್ , ಪ್ರವೀಣ ಆಳ್ವ, ಜಗದೀಶ್ ಆಳ್ವ ಕುವೆತ್ತಬೈಲು, ಜಯಂತ್ ಪಾದಲ್ಪಾಡಿ, ರಾಜೇಶ್ ಶೆಟ್ಟಿ ಪಜೀರು, ವಿಕಾಸ್ ಮುಡಿಪು, ನವೀನ್ ಶೆಟ್ಟಿ ಕುರ್ನಾಡು, ದೇವಪ್ಪ ಕುಲಾಲ್, ಲಕ್ಷ್ಮಣ ಗಟ್ಟಿ, ಗೋಪಾಲ ಅಶ್ವತ್ಥಡಿ, ಮುನೀರ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.



