ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸಮಾಜ ಹಣ ಮತ್ತು ಅಧಿಕಾರದ ಹಿಂದೆ ಬಿದ್ದಿರುವುದರಿಂದ ಮಾನವೀಯತೆಗೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಾಜಕ್ಕೆ ಬಹಳಷ್ಟು ತೊಂದರೆಗಳಿದ್ದು, ಅದನ್ನು ಹೋಗಲಾಡಿಸುವ ಪ್ರಯತ್ನ ಯುವ ಸಮುದಾಯದಿಂದ ಆಗಬೇಕಿದೆ ಎಂದು ಕರ್ನಾಟಕ ರಾಜ್ಯದ ನಿವೃತ್ತ ಲೋಕಾಯುಕ್ತ ಡಾ. ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ. ಅವರು ದೇರಳಕಟ್ಟೆ ನಿಟ್ಟೆ ವೈದ್ಯಕೀಯ ವಿಶ್ವವಿದ್ಯಾನಿಯದ ಕ್ಷೇಮ ಆಡಿಟೋರಿಯಂನಲ್ಲಿ ಬುಧವಾರ ನಡೆದ ವಾಕ್ ಮತ್ತು ಶ್ರವಣ ವಿಭಾಗದ ವಿದ್ಯಾರ್ಥಿಗಳ 7ನೇ ವರ್ಷದ ಘಟಿಕೋತ್ಸವದಲ್ಲಿ ಪದವಿ ಪ್ರಧಾನವನ್ನು ಮಾಡಿ ಮಾತನಾಡಿದರು.
ಲೋಕಾಯುಕ್ತನಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭ ಸಮಾಜದಲ್ಲಿ ಮೌಲ್ಯಗಳ ಕುಸಿತ ಹಾಗೂ ಮಾನವೀಯತೆಯ ಕೊರತೆ ಇರುವುದನ್ನು ಮನಗಂಡಿದ್ದೇನೆ. ಈ ನಿಟ್ಟಿನಲ್ಲಿ ಬದ್ಧತೆಯ ಸಮಾಜ ನಿರ್ಮಾಣ ಆಗಬೇಕಿದೆ. ಅದಕ್ಕಾಗಿ ಯುವ ಸಮುದಾಯ ಮಾನವೀಯತೆಯನ್ನು ಪ್ರತಿಪಾದಿಸುವುದರ ಮೂಲಕ ಕರ್ತವ್ಯಗಳಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ವಿ.ವಿ ಉಪಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಮಾತನಾಡಿ ಸಮಾಜದಲ್ಲಿ ಶೇ.1.83 ರಷ್ಟು ಮಂದಿ ಅಂಗವೈಕಲ್ಯತೆ ಜತೆಗೆ ಬಾಳುತ್ತಿದ್ದಾರೆ. ಅದರಲ್ಲಿಯೂ ಕಿವಿ ಮತ್ತು ಬಾಯಿ ಬಾರದವರ ಸಂಖ್ಯೆ ಅಧಿಕವಾಗಿದೆ. ಅವರ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾನವೀಯತೆಯನ್ನು ಕಾಣಲು ಸಾಧ್ಯ. ಉತಮ್ಮ ಪ್ರಜೆ ಹಾಗೂ ಗುಣನಡತೆ ಸರಿಯಾಗಿದಲ್ಲಿ ಜೀವನದಲ್ಲಿ ಯಶಸ್ಸು ಸುಲಭವಾಗಿ ಕಾಣಬಹುದು ಎಂದರು. ವಾಕ್ ಮತ್ತು ಶ್ರವಣ ವಿಭಾಗದ 30 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನವನ್ನು ಮಾಡಲಾಯಿತು.
ಈ ವೇಳೆ ದಶಮಾನೋತ್ಸವ ನಿಯತಕಾಲಿಕವನ್ನು ನಿವೃತ್ತ ಲೋಕಾಯುಕ್ತ ಡಾ. ಎನ್.ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಿದರು. ನಿಟ್ಟೆ ವಿಶ್ವವಿದ್ಯಾನಿಯದ ವಾಕ್ ಮತ್ತು ಶ್ರವಣ ವಿಭಾಗದ ಪ್ರಾಂಶುಪಾಲೆ ಉಷಾ ಶಾಸ್ತ್ರಿ ಉಪಸ್ಥಿತರಿದ್ದರು.ನಿಟ್ಟೆ ವಿಶ್ವವಿದ್ಯಾನಿಯದ ವಾಕ್ ಮತ್ತು ಶ್ರವಣ ವಿಭಾಗ ನಿರ್ದೇಶಕ ಪ್ರೊ. ದತ್ತಾತ್ರೇಯ ಸ್ವಾಗತಿಸಿದರು. ಶಿಲ್ಪಾ ಎನ್.ಪಿ ಕಾರ್ಯಕ್ರಮ ನಿರೂಪಿಸಿ, ಮಾಯಾ ವರ್ಮಾ ವಂದಿಸಿದರು.











