ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಕಾಸರಗೋಡು, ದಕ್ಷಿಣ ಕನ್ನಡ ಸೇರಿದಂತೆ ಕೊಡಗು ಜಿಲ್ಲೆಗಳ ಹಲವಾರು ಪ್ರಧಾನ ದೇವಸ್ಥಾನಗಳ ಪ್ರಧಾನ ತಂತ್ರಿವರ್ಯರಾದ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಟ್ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು (ಹಿರಿಯ) (73) ಎ.11ರಂದು ಮಂಗಳವಾರ ನಿಧನ ಹೊಂದಿದರು.
ಉಚ್ಚಿಲ ಕೋಟೆ ಶ್ರೀ ಮಹಾವಿಷ್ಣು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಆಗಿದ್ದ ಪದ್ಮನಾಭ ತಂತ್ರಿವರ್ಯರು ಕಳೆದ 53 ವರ್ಷಗಳಿಂದ ಪರಂಪರಾಗತವಾದ ತಂತ್ರಸ್ಥಾನವನ್ನು ನಡೆಸಿಕೊಂಡು ಬರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದರು. ಸುಮಾರು 900 ವರ್ಷಗಳ ಹಿಂದೆ ಉಚ್ಚಿಲದಿಂದ ನೀಲೇಶ್ವರಕ್ಕೆ ಸ್ಥಳಾಂತರಗೊಂಡಿದ್ದ ಇವರ ಹಿರಿಯರಿಂದ ನೀಲೇಶ್ವರ ತಂತ್ರಿವರ್ಯರು ಎನ್ನುವ ಹೆಸರು ಬಂದಿದ್ದು, ಬಳಿಕ ಉಚ್ಚಿಲದಲ್ಲಿ ನೆಲೆ ನಿಂತು ಕೇರಳ ಆಗಮ ಶಾಸ್ತ್ರಕ್ಕನುಸಾರವಾಗಿ, ತಂತ್ರಸ್ಥಾನವನ್ನು ಕ್ಷೇತ್ರ ಆಚಾರ ನಿಯಮಗಳನ್ನು ಪಾಲಿಸಿಕೊಂಡು ಬಂದ ಹಿನ್ನಲೆಯಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಕೊಡಗು, ಜಿಲ್ಲೆಗಳ ಹಲವಾರು ಪ್ರಧಾನ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಪ್ರತಿಷ್ಠಾ ಕಾರ್ಯ ಮತ್ತು ಉತ್ಸವಗಳನ್ನು ನಡೆಸಿಕೊಂಡು ಬರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದರು.
ವೈಧಿಕದೊಂದಿಗೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ವಲಯ ಅಧ್ಯಕ್ಷರಾಗಿ, ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಸಹೋದರ ಕಿಕಾಂಗೋಟ್ ದಾಮೋದರ ತಂತ್ರಿ, ಪುತ್ರ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಪತ್ನಿ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತ ಹಿರಿಯ ಪದ್ಮನಾಭ ತಂತ್ರಿಗಳ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನಗಳು ಬುಧವಾರ ಬೆಳಗ್ಗೆ ಉಚ್ಚಿಲದ ಸ್ವಗೃಹದಲ್ಲಿ ನೆರವೇರಿತು. ಅನೇಕ ಗಣ್ಯರು ತಂತ್ರಿಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.





