ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಮಂಗಳೂರು ಪೊಲೀಸ್ ಕಮೀಷನರ್ ಕಚೇರಿ ಎದುರು ಮಂಗಳವಾರದಂದು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪಿಎಫ್ ಐ ಕಾರ್ಯಕರ್ತರಿಗೆ ಲಾಠಿಚಾರ್ಜ್ ನಡೆಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೂಕ್ಷ್ಮ ಪ್ರದೇಶ ತೊಕ್ಕೊಟ್ಟು, ಉಳ್ಳಾಲ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ತೊಕ್ಕೊಟ್ಟು, ದೇರಳಕಟ್ಟೆ, ಕುತ್ತಾರು, ಕೋಟೆಕಾರು, ತಲಪಾಡಿ , ಭಾಗಗಳಲ್ಲಿ ಪೊಲೀಸ್ ಆಯುಕ್ತರ ಆದೇಶದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯ ಠಾಣಾ ಸಿಬ್ಬಂದಿ ರಸ್ತೆ ಬದಿ ಗಸ್ತಿನಲ್ಲಿರುವುದು ಕಡಿಮೆಯಾಗಿ ಕಂಡುಬಂತು. ಬೆಳಿಗ್ಗೆ ಉರ್ವ ಸಬ್ ಇನ್ಸ್ ಪೆಕ್ಟರ್ ಮೇಲಿನ ಹಲ್ಲೆಯಿಂದಾಗಿ ಸ್ಥಳೀಯ ಪೊಲೀಸರು ಬೆದರಿ ಗಸ್ತಿನಲ್ಲಿರಲಿಲ್ಲ ಅನ್ನುವುದು ಸ್ಥಳೀಯರ ಅಭಿಪ್ರಾಯವಾಗಿತ್ತು. ಕೆಎಸ್‍ಆರ್‍ಪಿ ಪೊಲೀಸರೇ ಹೆಚ್ಚಾಗಿ ಭದ್ರತೆಯಲ್ಲಿರುವುದು ಕಂಡುಬಂತು.
ಪೊಲೀಸರ ದೌರ್ಜನ್ಯಕ್ಕೆ: ಎಸ್ಸೆಸ್ಸೆಫ್ ಖಂಡನೆ
ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಖಂಡಿಸಿದ್ದಾರೆ.
ಇಲ್ಲಿ ಯಾವುದೇ ಪ್ರತಿಭಟನೆ ನಡೆದಾಗ ಸಾಮಾನ್ಯವಾಗಿ ಸಂಬಂಧಪಟ್ಟವರು ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟು ಅಹವಾಲು ಆಲಿಸುವ ಪರಿಪಾಠ ರೂಢಿಯಲ್ಲಿದೆ. ಅಥವಾ ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸುವ ಕ್ರಮವೂ ಸ್ವಾಭಾವಿಕ. ಆದರೆ ಮಂಗಳೂರಿನಲ್ಲಿ ಪ್ರತಿಭಟನಾನಿರತರನ್ನು ಪೊಲೀಸರು ಅಪ್ರಚೋದಿತರಾಗಿ ಥಳಿಸುವುದು ವಿಡಿಯೋ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ರಾಜ್ಯದ ಅಧಿಕಾರರೂಢ ಪಕ್ಷದ ಸ್ಥಳೀಯ ಮುಸ್ಲಿಂ ಮುಖಂಡರು ಈ ಬಗ್ಗೆ ಮೌನ ಮುರಿಯಬೇಕು. ಪೊಲೀಸರು ಇಂತಹ ವರ್ತನೆಯಿಂದ ಅಲ್ಪಸಂಖ್ಯಾತರಲ್ಲಿ ಅಭದ್ರತಾ ಭಾವ ಬೆಳೆಯುವ ಅಪಾಯವಿದೆ. ಆದುದರಿಂದ ದೌರ್ಜನ್ಯವೆಸಗಿರುವ ಪೆÇಲೀಸರ ವಿರುದ್ಧ ರಾಜ್ಯಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಇಂತಹ ಸಂದರ್ಭಗಳನ್ನು ಕೋಮುಶಕ್ತಿಗಳು ದುರುಪಯೋಗ ಪಡಿಸದಂತೆ ಸಮುದಾಯದ ಎಲ್ಲರೂ ಎಚ್ಚರ ವಹಿಸಬೇಕು, ಶಾಂತಿ ಕಾಪಾಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


