ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್
ಉಳ್ಳಾಲ: 4 ದಿನಗಳಿಗೊಮ್ಮೆ ಕುಡಿಯುವ ನೀರು ಕೊಡುತ್ತಿರುವ ಸರಕಾರಗಳು, ಜನರನ್ನು ಕೆಲಸಕ್ಕೆ ಹೋಗದೆ ನೀರಿಗಾಗಿ ಅಲೆದಾಟ ನಡೆಸುವಂತಹ ವಾತಾವರಣವನ್ನು ನಿರ್ಮಿಸಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೃಷ್ಣಪ್ಪ ಸಾಲ್ಯಾನ್ ಅಭಿಪ್ರಾಯಪಟ್ಟರು.
ಅವರು ಬೆಲೆ ಏರಿಕೆ ವಿರೋಧಿಸಿ ಸಿಪಿಐಎಂ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಶ್ರೀಮಂತರನ್ನು ರಕ್ಷಿಸುವ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಬಡ, ಮಾಧ್ಯಮ ವರ್ಗದವರು ಬೀದಿಪಾಲಾಗುವಂತಹ ಸ್ಥಿತಿ ಉದ್ಭವಿಸಿದೆ. ಕುಡಿಯುವ ನೀರನ್ನೇ ಪೂರೈಸಲಾಗದ ಸರಕಾರ ಮತ್ತೆ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ದಿನಬಳಕೆ ವಸ್ತುಗಳಿಗೂ ಬೆಲೆ ಏರಿಕೆ ಮಾಡುವ ಮೂಲಕ ಚುನಾವಣೆ ವೇಳೆ ನೀಡಿದ ಭರವಸೆಯನ್ನೇ ಸುಳ್ಳಾಗಿಸಿದ್ದಾರೆ. ಕನಿಷ್ಠ ನೀರಿನ ವ್ಯವಸ್ಥೆಯಲ್ಲಾದರೂ ಸ್ಥಳೀಯ ಜನಪ್ರತಿನಿಧಿಗಳುಯ ಸ್ಪಂಧಿಸಿ ಜನಸಾಮಾನ್ಯರಿಗೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕಿದೆ ಎಂದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಯು.ಜಯಂತ ನಾೈಕ್ ಮಾತನಾಡಿ ನೋಟು ಅಮಾನ್ಯೀಕರಣದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ವಾರಕ್ಕೆ ಆರು ಬಾರಿ ಕೆಲಸ ನಿರ್ವಹಿಸುತ್ತಿದ್ದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಅಲೆದಾಡುತ್ತಿದ್ದಾರೆ. ಬೀಡಿ ಕಾರ್ಮಿಕರಿಗೆ ಕೋಟ್ಪಾ ಕಾಯ್ದೆ ಮೂಲಕ ಕೈಗಾರಿಕೆಯನ್ನು ನಿಷೇಧಿಸಲು ಮುಂದಾಗಿದ್ದಾರೆ. ಇದರಿಂದ ಕಾರ್ಮಿಕರು, ಬಡವರ್ಗದವರು ರಸ್ತೆಗೆ ಇಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಈ ಸಂದರ್ಭ ಸುಂದರ ಕುಂಪಲ, ನಾರಾಯಣ ತಲಪಾಡಿ, ಮಹಾಬಲ.ಟಿ.ದೆಪ್ಪೆಲಿಮಾರ್, ಬಾಬು ಪಿಲಾರ್, ಸೋಮೇಶ್ವರ ಪಂ. ಸದಸ್ಯೆ ನಳಿನಾಕ್ಷಿ , ಮೀನಾಕ್ಷಿ, ನಳಿನಿ ಉಳ್ಳಾಲಬೈಲು ಮೊದಲಾದವರು ಉಪಸ್ಥಿತರಿದ್ದರು. ವಿಲಾಸಿನಿ ತೊಕ್ಕೊಟ್ಟು ಸ್ವಾಗತಿಸಿದರು. ರೋಹಿದಾಸ್ ಭಟ್ನಗರ ವಂದಿಸಿದರು.








