ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ದೈಹಿಕ ಶಿಕ್ಷಣವು ನಮ್ಮಲ್ಲಿ ದೈಹಿಕ ದೃಢತೆಯನ್ನು ಬೆಳೆಸುವುದು ಮಾತ್ರವಲ್ಲದೆ ಉತ್ತಮವಾದ ಮನಸ್ಸು, ಶಾಂತಿ ನೆಮ್ಮದಿಗೆ ಸ್ಪೂರ್ತಿದಾಯಕವಾಗಿದೆ. ಹಾಗೆಯೇ ನಮ್ಮ ಋಣಾತ್ಮಕ ಚಿಂತನೆಯನ್ನು ದೂರಗೊಳಿಸಿ ಒಗ್ಗಟ್ಟಿನೊಂದಿಗೆ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಹಳೆಸೆನೆಟ್ ಸಭಾಂಗಣದಲ್ಲಿ `ಇವಾಲ್ಯೂಷನ್ ಆಫ್ ಫಿಸಿಕಲ್ ಎಜ್ಯುಕೇಶನ್ ಪ್ರೋಗ್ರಾಮ್ ಇನ್ ಕಾಲೇಜ್ ಅಫಿಲಿಯೇಟೆಡ್ ಟು ಮಂಗಳೂರು ಯುನಿವರ್ಸಿಟಿ’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ದೈಹಿಕ ಶಿಕ್ಷಣದ ಬೆಳವಣಿಗೆಗೆ ಅಷ್ಟಾಗಿ ಮಹತ್ವ ಸಿಕ್ಕಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಹಂತ ಹಂತವಾಗಿ ವ್ಯವಸ್ಥಿತವಾದ ದೈಹಿಕ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳು ಹಮ್ಮಿಕೊಂಡರೆ ದೈಹಿಕ ಸದೃಡತೆಯಳ್ಳ ಮಾನವ ಸಂಪನ್ಮೂಲದ ನಿರ್ಮಾಣದೊಂದಿಗೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಪೊಲೀಸ್ ಇಲಾಖೆ ಮತ್ತು ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಇದ್ದು ಪೊಲೀಸರು ದೈಹಿಕ ದೃಢತೆಯನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಇಂತಹ ಕಾರ್ಯಾಗಾರವು ಬಹಳ ಮಹತ್ವಪೂರ್ಣವಾದುದು ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ.ಲೋಕೇಶ್ ಅವರು, ಹಿಂದಿನ ರಾಜರ ಕಾಲದಲ್ಲಿಯೇ ಸೈನ್ಯವನ್ನು ಸದೃಢವಾಗಿಸಲು ದೈಹಿಕ ಶಿಕ್ಷಣದ ಬೇರೆ ಬೇರೆ ತರಬೇತಿಗಳನ್ನು ಹಮ್ಮಿಕೊಂಡಿದ್ದ ಉದಾಹರಣೆಗಳಿವೆ. ಬಳಿಕ ಬ್ರಿಟೀಷರು ಬಂದ ನಂತರ ಹಲವಾರು ಕ್ರೀಡೆಗಳನ್ನು ಭಾರತಕ್ಕೆ ಪರಿಚಯಿಸಿದರು. ಆದರೆ ಇತ್ತೀಚೆಗೆ ಕ್ರೀಡೆಗೆ ಉತ್ತಮವಾದ ಪ್ರೋತ್ಸಾಹಗಳು ದೊರಕುತ್ತಿದ್ದು ಇದರ ಸದುಪಯೋಗ ಆಗಬೇಕು ಎಂದು ಹೇಳಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಕಿಶೋರ್ ಕುಮಾರ್ ಸಿ.ಕೆ.ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕರಾದ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಬಿ.ಕೆ.ವಂದಿಸಿದರು.



