ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮುಂಬಯಿ: ಟಿಬಿ, ಪೋಲಿಯೋ ರೋಗಗಳ ವಿರುದ್ದ ದ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಬಿಗ್ ಬಿ ಇದೀಗ ಮಹಿಳೆಯರನ್ನು ಕಾಡುವ ಸ್ತನದ ಕ್ಯಾನ್ಸರ್ ಬಗ್ಗೆಯೂ ಜಾಗೃತಿಯನ್ನು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೌದು ಸ್ತನ ಕ್ಯಾನ್ಸರ್ ಬಗ್ಗೆ “ಎಬಿಸಿ ಆಫ್ ಬ್ರೆಸ್ಟ್ ಕ್ಯಾನ್ಸರ್’ ಎಂಬ ಮೊಬೈಲ್ ಆಪ್ಲಿಕೇಶನ್ ಬಿಡುಗಡೆಯನ್ನು ಮಾಡಿದ ನಂತರ ಮಾತನಾಡಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸ್ತನ ಕ್ಯಾನ್ಸರ್ನಂತಹ ವ್ಯಾದಿಯ ಬಗ್ಗೆ ಮಹಿಳೆಯರು ಮುಜುಗರ ಹಾಗೂ ಕೀಳರಿಮೆಯನ್ನು ಇಟ್ಟುಕೊಳ್ಳದೇ ಸ್ವಸ್ಥ ಮನೋಭಾವದಿಂದ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮಹಿಳೆಯರಲ್ಲಿ ಧೈರ್ಯ ತುಂಬಿದ್ದಾರೆ.
ವ್ಯಾದಿಗೆ ತುತ್ತಾದ ಮಹಿಳೆಯರು ಇತರ ಯಾವುದೇ ಬಗೆಯ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಹಾಗೆ ಸ್ತನ ಕ್ಯಾನ್ಸರ್ಗೂ ಯಾವುದೇ ರೀತಿಯ ಮುಜುಗರವನ್ನು ಪಡದೇ ಧೈರ್ಯದಿಂದ ಚಿಕಿತ್ಸೆಯನ್ನು ಪಡೆಯಬೇಕು. “ಎಬಿಸಿ ಆಫ್ ಬ್ರೆಸ್ಟ್ ಕ್ಯಾನ್ಸರ್’ ಮೊಬೈಲ್ ಆಪ್ಲಿಕೇಶನ್ ಈ ರೋಗದ ಬಗೆಗಿನ ಮಾಹಿತಿಗಳನ್ನು ಆಮೂಲಾಗ್ರವಾಗಿ ಒದಗಿಸುತ್ತದೆ ಎಂದರು.
ಕ್ಯಾನ್ಸರ್ ನಂತಹ ರೋಗಗಳ ಬಗ್ಗೆ ಪೀಡಿತರು ಪೂರ್ಣ ಮಾಹಿತಿ ಹೊಂದಿರುವುದು ಅಗತ್ಯ. ತಾವು ವೈದ್ಯರನ್ನು ಕಾಣಬೇಕಾದ ಅಗತ್ಯವಿಲ್ಲ ತಮಗೆ ವೈದ್ಯರ ಸಮಾಲೋಚನೆ ಬೇಕಾಗಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಸಕಾಲದಲ್ಲಿ ವೈದ್ಯಕೀಯ ನೆರವು ಪಡೆದುಕೊಂಡರೆ ಎಷ್ಟೋ ವ್ಯಾದಿಗಳನ್ನು ಆರಂಭಿಕ ಹಂತದಲ್ಲೇ ಗುಣಪಡಿಸಲು ಸಾಧ್ಯವಿದೆ ಎಂದು ಅಮಿತಾಭ್ ಹೇಳಿದರು.


