ಉಳ್ಳಾಲ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: `ಹೇ ಬೋಳಿಮಕ್ಳಾ ನಗ್ತಾ ಇದ್ದೀರಾ?’ ಹೀಗೆಂದು ಕಿರಿಕ್ ಪಾರ್ಟಿ ಚಿತ್ರದ ನಟ ರಕ್ಷಿತ್ ಶೆಟ್ಟಿ ಕೇಳ್ತಾ ಇದ್ದಾಗ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳೆಲ್ಲ ಎದ್ದೂಬಿದ್ದು ನಗಲಾರಂಭಿಸಿದರು. ಅಷ್ಟಕ್ಕೂ ಅವರು ಈ ರೀತಿ ಕಿರಿಕ್ ಮಾಡಲು ಕಾರಣವೂ ಇದೆ. ಹಾಗಾದರೆ ಈ ಸ್ಟೋರಿ ಓದಿ.
ನಿಟ್ಟೆ ಸಂವಹನ ಕಾಲೇಜು ದೇರಳಕಟ್ಟೆಯ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರಸಂಕಿರಣ ಮತ್ತು ಬೀಕಾನ್ಸ್ -2ಕೆ17 ಮೀಡಿಯಾ ಉತ್ಸವದ ಪ್ರಯುಕ್ತ ವಿದ್ಯಾರ್ಥಿಗಳ ಜತೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ವಿದ್ಯಾರ್ಥಿನಿಯೋರ್ವಳು, `ಏನಾದ್ರೂ ಡೈಲಾಗ್ ಹೇಳಿ ಸರ್’ ಎಂದಾಗ ರಕ್ಷಿತ್ ಅವರು ಒಮ್ಮಿಂದೊಮ್ಮೆಲೆ, `ಹೇ ಬೋಳಿಮಕ್ಳಾ ನಗ್ತಾ ಇದ್ದೀರಾ?’ ಎಂದು ಕೇಳಿದರು.
ನಗೆಗಡಲಿನಲ್ಲಿ ಸಂವಾದವನ್ನು ಮುಂದುವರಿಸಿದ ನಟ ರಕ್ಷಿತ್ ಶೆಟ್ಟಿಗೆ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಮುಂದಿಟ್ಟರು. ಪುತ್ತೂರಿನ ಚಿತ್ರಮಂದಿರದಲ್ಲಿ ಕಿರಿಕ್ ಪಾರ್ಟಿ ಚಿತ್ರ ಪ್ರದರ್ಶನವಾಗದೆ, ಊರಿನ ಜನರಿಗೆ ಚಿತ್ರ ವೀಕ್ಷಿಸಲು ಸಾಧ್ಯವಾಗಿಲ್ಲ, ಕನ್ನಡ ಚಿತ್ರಗಳು ಉಳಿದ ರಾಜ್ಯಗಳಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ, ನಿರ್ದೇಶಕನಾದ ಬಳಿಕ ಅನುಭವಗಳು, ಹೊಸ ಚಿತ್ರಗಳು, ಚಿತ್ರದ ಸಂಗೀತ ನೀಡುವವರು ಹೊರರಾಜ್ಯದವರೇ ಇದ್ದು, ಕರ್ನಾಟಕದವರೇಕಿಲ್ಲ?, ಹೊಡಿಮಗ ಸಾಹಿತ್ಯದ ನಡುವೆ ಮನಮುಟ್ಟುವ ಸಾಹಿತ್ಯದ ರಚನೆ ಹೇಗೆ ಸಾಧ್ಯವಾಯಿತು?, ತುಳು ಚಿತ್ರ ನಡೆಸುವ ಯೋಜನೆ ? ಅಪನಗದೀಕರಣದಿಂದ ಚಿತ್ರ ನಿರ್ಮಾಣಕ್ಕೆ ತೊಂದರೆಯಾಗಿದೆಯೇ ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಿತ್ ಚಿತ್ರ ವಿತರಣೆಯ ವಿಭಾಗ ಕರ್ನಾಟಕದಲ್ಲಿ 70-80 ವರ್ಷಗಳ ಹಿಂದಿನಂತೆ ಕಾರ್ಯಾಚರಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರಕಟಿಸಲು ಅಸಾಧ್ಯವಾಗುತ್ತಿದೆ. ವಿತರಣೆ ವಿಭಾಗ ಮುಂಚೂಣಿಯಾಗಿ ಕಾರ್ಯಾಚರಿಸಿದಾಗ ಕರ್ನಾಟಕದ ಚಿತ್ರಗಳು ಬೆಳೆಯಲು ಸಾಧ್ಯವಾಗುತ್ತದೆ. ಆಯಾಯ ರಾಜ್ಯಗಳಲ್ಲಿ ಅವರ ಭಾಷೆಯ ನಾಯಕ ನಟರ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತದೆ. ಇದರಿಂದ ಇತರೆ ಭಾಷೆಗಳ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನವಾಗಲು ಸಾಧ್ಯವಿಲ್ಲ. ಆದರೂ ಉಳಿದವರು ಕಂಡಂತೆ ಚಿತ್ರ ಚೆನ್ನೈನಲ್ಲಿ ಪ್ರದರ್ಶನ ಕಂಡಿತ್ತು, ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ಚಿತ್ರಗಳಿಗೂ ಅವಕಾಶ ಇರುವುದು ಉಲ್ಲೇಖನೀಯ.
ಆತ್ಮವಿಶ್ವಾಸದಿಂದ ಕಿರುಚಿತ್ರಗಳನ್ನು ನಡೆಸಲು ಆರಂಭಿಸಿದ್ದೆ. ಚಿತ್ರಗಳ ವೀಕ್ಷಣೆ, ಓದುವುದು, ಸಂದರ್ಶನಗಳ ವೀಕ್ಷಣೆ ಇವೆಲ್ಲಾ ಯಶಸ್ವಿ ಚಿತ್ರಗಳನ್ನು ನಡೆಸಲು ಪ್ರೇರೇಪಿಸಿತು. ಉತ್ತಮ ನಿರ್ದೇಶಕನಾದಲ್ಲಿ, ಉತ್ತಮ ನಾಯಕ ನಟನಾಗಲು ಸಾಧ್ಯವೆಂದೆನಿಸಿತು. ಅದರಂತೆ ತುಘಲಕ್ ಚಿತ್ರದೊಂದಿಗೆ ಕ್ನನಡಚಿತ್ರರಂಗಕ್ಕೆ ಪ್ರವೇಶಿಸುವ ಅವಕಾಶ ಇದೀಗ ಯಶಸ್ಸಿನ ಹಾದಿಯನ್ನು ತಲುಪಿಸಿದೆ. ಕಿರುಚಿತ್ರಗಳನ್ನು ರಚಿಸಿ ಅದರ ಮೂಲಕ ಚಿತ್ರದ ಕಲ್ಪನೆ ಇರಿಸುವ ಮೂಲಕ ಮುಂದುವರಿದಲ್ಲಿ ಉತ್ತಮ ಚಿತ್ರಗಳನ್ನು ಹೊರತರಲು ಸಾಧ್ಯ ಅನ್ನುವ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಸಂಗೀತ ಕ್ಷೇತ್ರದಲ್ಲಿ ರಾಜ್ಯದ ತಂತ್ರಜ್ಞರ ಕೊರತೆಯಿದೆ. ಕೇರಳ ಮತ್ತು ಚೆನ್ನೈನ ತಂತ್ರಜ್ಞರೇ ಸಂಗೀತ ಕ್ಷೇತ್ರದಲ್ಲಿದ್ದು, ಇದರಿಂದ ಹಲವು ನ್ಯೂನ್ಯತೆಗಳು ಇವೆ. ಮಾತೃಭಾಷೆಯ ತಂತ್ರಜ್ಞರು ಸಂಗೀತ ಕ್ಷೇತ್ರದಲ್ಲಿ ತೊಡಗಿಸುವಂತೆ ಮಾಡಬೇಕಿದೆ. ಉಳಿದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ. ರಾಜ್ಯದ ಮೂಲೆಮೂಲೆಯಲ್ಲೂ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ತೆರೆದರೆ ಕನ್ನಡ ಚಿತ್ರರಂಗದಲ್ಲಿ ಅಭಿವೃದ್ಧಿ ಕಾಣಬಹುದು. ಹೊಡೀಮಗಾ ಸಾಹಿತ್ಯನೇ ಉತ್ತಮ ಸಾಹಿತ್ಯ ಬರೆಯಲು ಪ್ರೋತ್ಸಾಹ ನೀಡಿತ್ತು. ಅಂತಹ ಸಾಹಿತ್ಯವನ್ನು ಕೇಳಿ ಪರ್ಯಾಯ ಸಾಹಿತ್ಯದ ಹಾಡುಗಳು ಹೊರಬರಬೇಕೆಂಬ ಉದ್ದೇಶದಿಂದ ಕೆಲ ಸಿದ್ಧಾಂತಗಳನ್ನು ಮನಸಿನಲ್ಲಿಟ್ಟು ರಚಿಸಿದ ಹಾಡುಗಳು ಜನಮೆಚ್ಚುಗೆ ಪಡೆಯಿತು. ನೋಟು ಅಪನಗದೀಕರಣ ವೇಳೆ ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಕಂಡಿತ್ತು. ಆದರೆ ದಿನಗೂಲಿ ಕಾರ್ಮಿಕರಿಗೆ ನಗದು ರೂಪದಲ್ಲೇ ಹಣ ಕೊಡಬೇಕಾಗಿತ್ತು. ಇಲ್ಲವಾದಲ್ಲಿ ತೊಂದರೆಯಾಗುತಿತ್ತು ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ತುಳು ಭಾಷೆ ಚಿತ್ರವನ್ನು ವಿಶ್ವಾದ್ಯಂತ ಖ್ಯಾತಿ ಗಳಿಸುವ ಉದ್ದೇಶ :
ತುಳು ಮಾತೃಭಾಷೆ ಆಗಿರುವುದರಿಂದ ತುಳು ಚಿತ್ರವನ್ನು ರಚಿಸುವ ಉದ್ದೇಶವನ್ನು ಹೊಂದಿದ್ದೇನೆ. ಮಯಾನ್ ಭಾಷೆಯ `ಎಪಕಾಲಿಪ್ಟೋ’ ಅನ್ನುವ ಚಿತ್ರ ವಿಶ್ವಾದ್ಯಂತ ಖ್ಯಾತಿಯನ್ನು ಪಡೆದಿತ್ತು. ಈ ಮೂಲಕ ಚಿತ್ರಕ್ಕೆ ಭಾಷೆಯ ಅಗತ್ಯವಿರುವುದಿಲ್ಲ, ನೋಡುವಂತದ್ದಾಗಿದ್ದರೆ ವಿಶ್ವದ ಜನತೆಯೂ ಒಪ್ಪುತ್ತಾರೆ ಅನ್ನುವುದನ್ನು ಚಿತ್ರ ತೋರಿಸಿ ಕೊಟ್ಟಿತ್ತು, ಇಂತಹದ್ದೇ ಮಾದರಿಯಲ್ಲಿ ಬಿಗ್ ಬಜೆಟಿನಲ್ಲಿ ತುಳು ಚಿತ್ರವನ್ನು ರಚಿಸುವ ಉದ್ದೇಶ ಇದೆ. ತುಳು ಸಿನೆಮಾವನ್ನು ವಿಶ್ವದಾದ್ಯಂತ ಜನ ಒಪ್ಪುವಂತೆ ಮಾಡಬೇಕಿದೆ ಎಂದರು.





















