ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕಿನ್ಯಾ:ಕಿನ್ಯಾದಲ್ಲಿ ರೇಷನ್ ವಿತರಣೆಯಲ್ಲಿ ಬಹಳಷ್ಟು ತೊಂದರೆಯಾಗಿ, ಗ್ರಾಮಸ್ಥರು ಕೆಲಸ ಬಿಟ್ಟು ಅಂಗಡಿ ಎದುರು ಸಾಲಿನಲ್ಲಿ ನಿಲ್ಲುವಂತಾಗಿದೆ. ಸಮರ್ಪಕವಾಗಿ ಅಕ್ಕಿಯ ಪೂರೈಕೆಯಾಗದೇ ಜನ ಬಹಳಷ್ಟು ತೊಂದರೆಗೀಡಾಗಿದ್ದಾರೆ. ಇದನ್ನು ಅಧಿಕಾರಿಯ ಜತೆ ಹೇಳೋಣವೆಂದರೆ ಅಧಿಕಾರಿಯೇ ಬಂದಿಲ್ಲ. ಇದರಿಂದ ಗ್ರಾಮಸಭೆ ನಡೆಯುವುದು ಸಮಂಜಸವಲ್ಲ ಎಂಬ ಗ್ರಾಮಸ್ಥರ ಒಮ್ಮತದ ಅಭಿಪ್ರಾಯದ ಮೂಲಕ ಇಡೀ ಗ್ರಾಮಸಭೆ ಗೊಂದಲದಲ್ಲಿ ಮುಂದುವರಿದ ಪ್ರಸಂಗ ಕಿನ್ಯಾ ಗ್ರಾಮಸಭೆಯಲ್ಲಿ ನಡೆಯಿತು.
ಕಿನ್ಯಾದ ಸರಕಾರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2016-17 ನೇ ಸಾಲಿನ ಗ್ರಾಮಸಭೆ ಸಮರ್ಪಕ ರೇಷನ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಾದ-ವಿವಾದಗಳ ನಡುವೆ ಮುಗಿಯಿತು.
ಹಿಂದಿನ ಗ್ರಾಮಸಭೆಯಲ್ಲಿ ಅಧಿಕಾರಿಗಳ ಅನುಪಸ್ಥಿತಿಯಿಂದ ಗ್ರಾಮಸ್ಥರು ಗ್ರಾಮಸಭೆಯನ್ನೇ ರದ್ದುಗೊಳಿಸುವಂತೆ ಆಗ್ರಹಿಸಿ ಹೊರನಡೆದಿದ್ದರು. ಕಳೆದ ಗ್ರಾಮಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಮುಂದಿನ ಗ್ರಾಮಸಭೆಯಲ್ಲಿ ಬರಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಇಂದು ನಡೆದ ಸಭೆಯಲ್ಲೂ ಆಹಾರ ಇಲಾಖೆಯ ಯಾವುದೇ ಅಧಿಕಾರಿಯ ಉಪಸ್ಥಿತಿ ಇರಲಿಲ್ಲ. ಕಿನ್ಯಾದಲ್ಲಿ ರೇಷನ್ ಅಂಗಡಿಯಲ್ಲಿ ಸಮರ್ಪಕವಾಗಿ ಅಕ್ಕಿಯ ಪೂರೈಕೆಯಾಗದೇ ಜನ ಬಹಳಷ್ಟು ತೊಂದರೆಗೀಡಾಗಿದ್ದಾರೆ. ಇದನ್ನು ಅಧಿಕಾರಿಯ ಜತೆ ಹೇಳೋಣವೆಂದರೆ ಅಧಿಕಾರಿಯೇ ಬಂದಿಲ್ಲ ಎಂಬ ವಿಚಾರ ಕೆಲ ಹೊತ್ತು ಗೊಂದಲಕ್ಕೆ ಕಾರಣವಾಯಿತು. ಉಪಾಧ್ಯಕ್ಷ ಸಿರಾಜ್ ಕಿನ್ಯಾ ಇವರು ಕೂಪನ್ ಅಪ್ಲೋಡ್ ಆಗದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವಿಸಿದೆ. ಅಂಗಡಿ ಮಾಲೀಕರ ತಪ್ಪಿನಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದಾಗ, ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಂಡವರು ಅದನ್ನು ಸರಿಪಡಿಸಬೇಕಾಗಿರುವುದು ಆದ್ಯ ಕರ್ತವ್ಯ ಎಂದು ಗ್ರಾಮಸ್ಥರು ಆಗ್ರಹಿಸಿದರು. ಶೀಘ್ರವೇ ಆಹಾರ ಇಲಾಖೆಯ ಅಧಿಕಾರಿ ಜತೆಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಬೇಕೆಂಬ ಒತ್ತಾಯ ಕೇಳಿಬಂತು.
ಮಾ.24 ರಿಂದ ಪ್ಲಾಸ್ಟಿಕ್ ಮುಕ್ತ
ಮಾ.24 ರಿಂದ ಕಿನ್ಯಾ ಗ್ರಾಮವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ಆಯಾಯ ವಾರ್ಡುಗಳಲ್ಲಿ ನೈರ್ಮಲ್ಯ ಸಮಿತಿಯನ್ನು ರಚಿಸಲಾಗುವುದು. ನಿಗದಿತ ದಿನಾಂಕದ ಬಳಿಕ ಪ್ಲಾಸ್ಟಿಕ್ ಬ್ಯಾನರುಗಳನ್ನು ಅಳವಡಿಸಿದಲ್ಲಿ ಅದನ್ನು ಪಂಚಾಯಿತಿ ವತಿಯಿಂದ ತೆಗೆಯುವ ಕ್ರಮಕೈಗೊಳ್ಳಲಾಗುವುದು. ಅಲ್ಲದೆ ದಂಡವನ್ನು ವಿಧಿಸುವ ತೀರ್ಮಾನ ಕೈಗೊಳ್ಳಲಾಗುವುದು . ತ್ಯಾಜ್ಯ ನಿರ್ವಹಣೆಗೆ ಪ್ರತಿ ಮನೆಗಳಲ್ಲಿ ಪೈಪ್ ಕಂಪೋಸ್ಟ್ ರಚಿಸಲು ಸೂಚಿಸಲಾಗಿದೆ. ಅಲ್ಲಲ್ಲಿ ತ್ಯಾಜ್ಯ ಹಾಕುವ ಕುರಿತು ಪಂಚಾಯಿತಿಗೆ ಮೌಖಿಕ ದೂರುಗಳು ಮಾತ್ರ ಬರುತ್ತಿದೆ. ಲಿಖಿತವಾಗಿ ದೂರುಗಳು ಬಂದಲ್ಲಿ ಅದರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದರು.
ನೋಡೆಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಗೀತಾ ಶ್ಯಾನುಭಾಗ್ ಭಾಗವಹಿಸಿದ್ದರು.
ಈ ಸಂಧರ್ಭ ಗ್ರಾಮಕರಣಿಕ ಎನ್.ಜಿ.ಪ್ರಸಾದ್, ಆರೋಗ್ಯ ಇಲಾಖೆಯ ಮಂಜೇ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾರದಾ .ಕೆ, ಶಿಕ್ಷಣ ಇಲಾಖೆಯಿಂದ ವೀಣಾ ಡೇಸಾ, ಉಳ್ಳಾಲ ಪೊಲೀಸ್ ಠಾಣೆಯ ರೇಣುಕಾ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.


